ಬೆಂಗಳೂರು: ರಾಜ್ಯಕ್ಕೆ ಕೇಂದ್ರದಿಂದ ಬರಬೇಕಿರುವ ಅನುದಾನ ಬಿಡುಗಡೆಗೆ ಒತ್ತಾಯಿಸುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಮಾಡಲಿದ್ದಾರೆ. ಜೂನ್ 29ರ ರಾತ್ರಿ 8 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಸಮಯ ನಿಗದಿಯಾಗಿರುವುದನ್ನು ಸಿಎಂ ಖಚಿತಪಡಿಸಿದ್ದಾರೆ.
ಈ ಕುರಿತಂತೆ ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾಹಿತಿ ಹಂಚಿಕೊಂಡಿರುವ ಸಿದ್ದರಾಮಯ್ಯ, ಪ್ರಧಾನಿ ಹಾಗೂ ಕೇಂದ್ರದ ಹಲವು ಸಚಿವರ ಜತೆ ಮಾತುಕತೆ ನಡೆಸುವ ಸಂಬಂಧ ದೆಹಲಿಗೆ ತತೆರಳುವುದಾಗಿ ತಿಳಿಸಿದ್ದಾರೆ.
ಪ್ರಧಾನಿ ಭೇಟಿಗೆ ಮುನ್ನ ರಾಜ್ಯದ ಸಂಸದರ ಜೊತೆ ಸಭೆ ನಡೆಸಿ ರಾಜ್ಯಕ್ಕೆ ಕೇಂದ್ರದಿಂದ ಬರಬೇಕಿರುವ ಅನುದಾನ, ಯೋಜನೆಗಳ ಬಗ್ಗೆ ಚರ್ಚೆ ನಡೆಸಿ ಮಾಹಿತಿ ಸಂಗ್ರಹಿಸುವುದಾಗಿ ತಿಳಿಸಿದ ಸಿದ್ದರಾಮಯ್ಯ, ಪ್ರಧಾನಿ ಹಾಗೂ ಕೇಂದ್ರ ಸಚಿವರ ಜೊತೆ ವಿವಿಧ ಯೋಜನೆಗಳ ಅನುಷ್ಠಾನಗಳ ಬಗ್ಗೆಯೂ ಚರ್ಚಿಸುವುದಾಗಿ ತಿಳಿಸಿದರು.






































































