ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನವದೆಹಲಿಯಲ್ಲಿ ಬುಧವಾರ ನಡೆದ 65ನೇ ರಾಷ್ಟ್ರೀಯ ಕಲಾ ಪ್ರದರ್ಶನದಲ್ಲಿ ಆಯ್ದ ಕಲಾವಿದರಿಗೆ ಲಲಿತ ಕಲಾ ಅಕಾಡೆಮಿ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಮೂರನೇ ಮುದ್ರಣ ಕಲಾ ದ್ವೈವಾರ್ಷಿಕ ಪ್ರದರ್ಶನ ‘ಪ್ರಿಂಟ್ ಬಿಯೆನ್ನಾಲೆ ಇಂಡಿಯಾ 2026’ರ ಗ್ರ್ಯಾಂಡ್ ಪ್ರಶಸ್ತಿ ವಿಜೇತರು ಹಾಗೂ ಗೌರವ ಪ್ರಶಸ್ತಿ ಪಡೆದವರನ್ನೂ ಅವರು ಸನ್ಮಾನಿಸಿದರು.
ಸಮಾರಂಭದಲ್ಲಿ ಮಾತನಾಡಿದ ರಾಷ್ಟ್ರಪತಿ, ಈ ಪ್ರದರ್ಶನವು ಭಾರತದ ಕಲಾತ್ಮಕ ಪರಂಪರೆ, ಸಾಂಸ್ಕೃತಿಕ ವೈವಿಧ್ಯತೆ ಮತ್ತು ಸಮಕಾಲೀನ ಸೃಜನಶೀಲತೆಯನ್ನು ಪ್ರತಿಬಿಂಬಿಸುತ್ತದೆ ಎಂದರು. ಕಲೆ ಎಂಬುದು ಚಿತ್ರಕಲೆ, ಶಿಲ್ಪಕಲೆ ಸೇರಿದಂತೆ ಸೃಜನಶೀಲ ಮಾಧ್ಯಮಗಳಿಗೆ ಮಾತ್ರ ಸೀಮಿತವಲ್ಲ. ಅದು ಸಂಸ್ಕೃತಿಯನ್ನು ಪ್ರತಿಬಿಂಬಿಸುವುದರ ಜತೆಗೆ ನೆನಪುಗಳನ್ನು ಸಂರಕ್ಷಿಸುತ್ತದೆ, ವರ್ತಮಾನದ ಅನುಭವಗಳನ್ನು ದಾಖಲಿಸುತ್ತದೆ ಮತ್ತು ಭವಿಷ್ಯದ ಆಶಯಗಳಿಗೆ ಅಭಿವ್ಯಕ್ತಿ ನೀಡುತ್ತದೆ ಎಂದು ಹೇಳಿದರು.

ದೂರದ ಪ್ರದೇಶಗಳಲ್ಲಿ ನೆಲೆಸಿರುವ ಸಾಂಪ್ರದಾಯಿಕ ಕಲಾವಿದರಿಗೆ ಹೊಸ ತಂತ್ರಜ್ಞಾನ ಮತ್ತು ಸಮಕಾಲೀನ ಕಲಾ ವಿಧಾನಗಳ ಕುರಿತು ತರಬೇತಿ ನೀಡುವ ಅಗತ್ಯವನ್ನು ಅವರು ಒತ್ತಿಹೇಳಿದರು. ಇದರಿಂದ ಕಲಾವಿದರು ತಮ್ಮ ಕೌಶಲವನ್ನು ಮತ್ತಷ್ಟು ಅಭಿವೃದ್ಧಿಪಡಿಸಿಕೊಂಡು, ವಿಶಾಲ ವೇದಿಕೆಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಸಾಧ್ಯವಾಗಲಿದೆ ಎಂದರು.
ಕಲಾವಿದರಿಗೆ ಆರ್ಥಿಕ ನೆರವು, ಮಾರುಕಟ್ಟೆ ಪ್ರವೇಶ ಮತ್ತು ಕಲಾ ಸಂಗ್ರಾಹಕರೊಂದಿಗೆ ಸಂಪರ್ಕ ಕಲ್ಪಿಸುವುದೂ ಅಗತ್ಯವಾಗಿದೆ ಎಂದು ಮುರ್ಮು ಹೇಳಿದರು. ಕಲಾಕೃತಿಗಳ ಮಾರಾಟಕ್ಕೆ ಉತ್ತೇಜನ ನೀಡಲು ಲಲಿತ ಕಲಾ ಅಕಾಡೆಮಿ ಮತ್ತು ಸಂಸ್ಕೃತಿ ಸಚಿವಾಲಯ ಕೈಗೊಳ್ಳುತ್ತಿರುವ ಪ್ರಯತ್ನಗಳನ್ನು ಸ್ವಾಗತಿಸಿದರು.
ಕಲೆ ಗ್ಯಾಲರಿಗಳಿಗೆ ಮಾತ್ರ ಸೀಮಿತವಾಗದೆ ಶಾಲೆಗಳು, ವಿಶ್ವವಿದ್ಯಾಲಯಗಳು, ಸಾರ್ವಜನಿಕ ಸ್ಥಳಗಳು ಹಾಗೂ ಸಮಾಜದ ಎಲ್ಲ ವರ್ಗಗಳನ್ನೂ ತಲುಪಬೇಕು ಎಂದು ಕರೆ ನೀಡಿದ ರಾಷ್ಟ್ರಪತಿ, ಯುವ ಮತ್ತು ಉದಯೋನ್ಮುಖ ಕಲಾವಿದರಿಗೆ ಹೊಸ ಮಾಧ್ಯಮಗಳನ್ನು ಅನ್ವೇಷಿಸಲು, ಪ್ರತಿಭೆ ಬೆಳೆಸಿಕೊಳ್ಳಲು ಹಾಗೂ ಸೃಜನಶೀಲ ಸಾಮರ್ಥ್ಯ ವಿಸ್ತರಿಸಲು ಹೆಚ್ಚಿನ ಅವಕಾಶಗಳನ್ನು ಕಲ್ಪಿಸಬೇಕು ಎಂದು ಹೇಳಿದರು.
















































































