ಅಮೃತಸರ: ಗಡಿಯಾಚೆಯಿಂದ ನಡೆಯುತ್ತಿದ್ದ ಮಾದಕವಸ್ತು ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆ ಜಾಲದ ವಿರುದ್ಧ ಕಾರ್ಯಾಚರಣೆ ನಡೆಸಿರುವ ಅಮೃತಸರ ಪೊಲೀಸರು, ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಏಳು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 3.5 ಕೆ.ಜಿ. ಹೆರಾಯಿನ್, ಹ್ಯಾಂಡ್ ಗ್ರೆನೇಡ್ ಹಾಗೂ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ. ಬಂಧಿತರಲ್ಲಿ ಮೂವರು ಅಪ್ರಾಪ್ತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೊದಲ ಕಾರ್ಯಾಚರಣೆಯಲ್ಲಿ ಹೆರಾಯಿನ್ ಸಾಗಣೆ ಮತ್ತು ಸಂಗ್ರಹಣೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಅಜಯ್ ಹಾಗೂ ರಾಬಿನ್ ಮಸಿಹ್ ಎಂಬುವರನ್ನು ಬಂಧಿಸಲಾಗಿದೆ. ಗಡಿಯಾಚೆಯಿಂದ ಹೆರಾಯಿನ್ ತಂದು ಸಂಗ್ರಹಿಸಿಟ್ಟಿದ್ದ ಆರೋಪಿಗಳು, ಮುಂದಿನ ಸೂಚನೆಗಾಗಿ ಕಾಯುತ್ತಿದ್ದರು ಎಂಬ ಮಾಹಿತಿ ತನಿಖೆಯಲ್ಲಿ ಲಭ್ಯವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಎರಡನೇ ಕಾರ್ಯಾಚರಣೆಯಲ್ಲಿ ಐವರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ಹ್ಯಾಂಡ್ ಗ್ರೆನೇಡ್ ಮತ್ತು .30 ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ. ಈ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡು ಟಾರ್ಗೆಟ್ ಕಿಲ್ಲಿಂಗ್ ನಡೆಸಲು ಸಂಚು ರೂಪಿಸಲಾಗಿತ್ತು ಎಂಬ ಶಂಕೆ ವ್ಯಕ್ತವಾಗಿದೆ. ಗಡಿಯಾಚೆಗಿನ ಸಂಪರ್ಕ ಹೊಂದಿರುವ ವ್ಯಕ್ತಿಗಳು ಆರೋಪಿಗಳಿಗೆ ನಿರ್ದೇಶನ ನೀಡುತ್ತಿದ್ದರೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಮಯೋಚಿತ ಕಾರ್ಯಾಚರಣೆಯಿಂದ ಸಂಭವನೀಯ ದಾಳಿ ಸಂಚನ್ನು ವಿಫಲಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಭಯೋತ್ಪಾದನೆ ಹಾಗೂ ಗಡಿಯಾಚೆಗಿನ ಕಳ್ಳಸಾಗಣೆ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿ ಅನುಸರಿಸಲಾಗುತ್ತಿದೆ ಎಂದು ಐಜಿ ಗುರ್ಪ್ರೀತ್ ಸಿಂಗ್ ಭುಲ್ಲರ್ ತಿಳಿಸಿದ್ದಾರೆ. ಟಾರ್ಗೆಟ್ ಕಿಲ್ಲಿಂಗ್ ಸಂಚಿನ ಕುರಿತು ಆಳವಾದ ತನಿಖೆ ನಡೆಸಲಾಗುವುದು ಎಂದೂ ಅವರು ಹೇಳಿದ್ದಾರೆ. ಎಸ್ಎಸ್ಪಿ ಕನ್ವಲ್ಪ್ರೀತ್ ಚಹಾಲ್ ನೇತೃತ್ವದಲ್ಲಿ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಮಾದಕವಸ್ತು ಮತ್ತು ಗ್ಯಾಂಗ್ಸ್ಟರ್ ಜಾಲಗಳ ವಿರುದ್ಧ ಕಠಿಣ ಕ್ರಮ ಮುಂದುವರಿಯಲಿದೆ ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ.
















































































