ಬೆಂಗಳೂರು: ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ರಾಜ್ಯ ಸರ್ಕಾರ 2d ಮೀಸಲಾತಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಕೂಡಲಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಸುದೀರ್ಘ ಹೋರಾಟದ ಫಲವಾಗಿ ಈ ಮೀಸಲಾತಿ ಸಿಕ್ಕಿದೆ ಎಂಬುದು ಸಮುದಾಯದ ಮಂದಿಯ ಅಭಿಪ್ರಾಯ.
ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಟ್ಟ ಮಾತ್ರಕ್ಕೆ ಅದು ಬಿಜೆಪಿಯ ಕೊಡುಗೆ ಅಲ್ಲ ಎಂಬುದು ಸಮುದಾಯದಲ್ಲಿರುವ ಕಾಂಗ್ರೆಸ್ ಧುರೀಣರ ಅಭಿಪ್ರಾಯ. ಮೀಸಲಾತಿ ಪ್ರಕಟಿಸಲು ಹಲವು ವರ್ಷಗಳೇ ಬೇಕಿತ್ತಾ? ಇಚ್ಛಾಶಕ್ತಿ ಇದ್ದಿದ್ದರೆ ಯಾವತ್ತೋ ಈ ಸೌಲಭ್ಯ ಪ್ರಕಟಿಸಬಹುದಿತ್ತು ಎಂಬುದು ಅನೇಕರ ಪ್ರತಿಪಾದನೆ. ಅಷ್ಟೇ ಅಲ್ಲ, ಮೀಸಲಾತಿ ಹೋರಾಟದಲ್ಲಿ ಬಿಜೆಪಿ ನಾಯಕರಷ್ಟೇ ಅಲ್ಲ, ಎಲ್ಲಾ ಪಕ್ಷಗಳ ನಾಯಕರೂ ಭಾಗಿಯಾಗಿದ್ದರು ಎಂಬುದು ಗಮನಾರ್ಹ.
ಈ ಚರ್ಚೆಗಳ ನಡುವೆಯೇ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಮಹಾಪೀಠ ಧರ್ಮ ಕ್ಷೇತ್ರದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರಿಗೆ ಸಂದೇಶವೊಂದನ್ನು ರವಾನಿಸಿದ್ದಾರೆ. ‘ಮೀಸಲಾತಿಯು ಇಡೀ ಸಮುದಾಯಕ್ಕೆ ಸೇರಿದ ಜಯವಾಗಿದೆ. ಇದಕ್ಕಾಗಿ ನಡೆದಿರುವ ಹೋರಾಟ ಸಮಾಜಹಿತದ ಕೆಲಸ ಎಂಬುದನ್ನು ಎಲ್ಲರೂ ಎಲ್ಲರೂ ತಿಳಿಯಬೇಕಿದೆ’ ಎಂದವರು ಹೇಳಿದ್ದಾರೆ.
ರಾಜ್ಯ ಸರ್ಕಾರ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ನೀಡಿರುವ 2d ಮೀಸಲಾತಿಯ ಕುರಿತು ಹಲವು ರಾಜಕೀಯ ಪಕ್ಷಗಳಲ್ಲಿರುವ, ನಮ್ಮ ಸಮುದಾಯದ ನಾಯಕರು ಅವರ ಅವರ ಅಭಿಪ್ರಾಯಗಳನ್ನು ಹಾಗೂ ವಿಚಾರಗಳನ್ನು ದೂರವಾಣಿ ಮೂಲಕ ಅಥವಾ ಖುದ್ದಾಗಿ ಭೇಟಿ ನೀಡಿ ನಮಗೆ ತಿಳಿಸಿರುತ್ತಾರೆ ಎಂದು ಮಾಹಿತಿ ಹಂಚಿಕೊಂಡಿರುವ ಶ್ರೀಗಳು, ‘ಎಲ್ಲರ ಗುರಿಯೂ ಸಮಾಜದ ಏಳಿಗೆಯೇ ಆಗಿದ್ದು, ನಾವೆಲ್ಲರೂ ಸಮುದಾಯದ ಏಳಿಗೆಗಾಗಿ ಶ್ರಮಿಸಬೇಕಿದೆ’ ಎಂದು ಸಮಾಜಕ್ಕೆ ಅರ್ಥಪೂರ್ಣ ಸಲಹೆ ನೀಡಿದ್ದಾರೆ. ನಮ್ಮ ಸಮುದಾಯದ ತಳಮಟ್ಟದ ವ್ಯಕ್ತಿಯ ಅಭ್ಯುದಯಕ್ಕಾಗಿ ನಾವು ಚಿಂತಿಸಬೇಕಾಗಿದೆ ಎಂದು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಪ್ರತಿಪಾದಿಸಿದ್ದಾರೆ.
ದೇಹ ಬಾಳಲಿ, ಬೀಳಲಿ; ಅದು ಕರ್ಮನದಿಯಲಿ ತೇಲಲಿ!
ಕೆಲರು ಹಾರಗಳಿಂದ ಸಿಂಗರಿಸದನು ಪೂಜಿಸಿ ಬಾಗಲಿ,
ಕೆಲರು ಕಾಲಿಂದೊದೆದು ನೂಕಲಿ!
ಹುಡಿಯು ಹುಡಿಯೊಳೆ ಹೋಗಲಿ!
ಎಲ್ಲ ಒಂದಿರಲಾರು ಹೊಗಳುವರಾರು ಹೊಗಳಿಸಿಕೊಂಬರು?
ನಿಂದೆ ನಿಂದಿಪರೆಲ್ಲ ಕೂಡಲು ಯಾರು ನಿಂದೆಯನುಂಬರು?
ಎಂದು ಸ್ವಾಮಿ ವಿವೇಕಾನಂದರು ಹೇಳಿರುವಂತೆ ನಾವು ಮಾತೃ ಸ್ಥಾನದಲ್ಲಿದ್ದು ಎಲ್ಲರ ಅಭಿಪ್ರಾಯಗಳನ್ನು ಹಾಗು ಅವರ ವಿಚಾರಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ಶ್ರೀಗಳು ಹೇಳಿದ್ದಾರೆ.