ಬೆಂಗಳೂರು: ರಾಜ್ಯ ಸರ್ಕಾರದ ಅವೈಜ್ಞಾನಿಕ ಕ್ರಮದಿಂದಾಗಿ ಬಡಪಾಯಿ ಜನರು ಸಂಕಷ್ಟಕ್ಕೊಳಗಾಗಿದ್ದಾರೆ. ಕಂದಾಯ ಇಲಾಖೆಯು ಹೊಸದಾಗಿ ಕಡ್ಡಾಯಗೊಳಿಸಿರುವ ಮುದ್ರಾಂಕ ಶುಲ್ಕ, ನೋಂದಾವಣಿ ಶುಲ್ಕಗಳ ಹಾಗೂ ಸೇವಾಶುಲ್ಕಗಳ ಆನ್‌ಲೈನ್ ಪಾವತಿ ಕಡ್ಡಾಯದ ಕ್ರಮದಿಂದಾಗಿ ಜನ ಗೊಂದಲಕ್ಕೀಡಾಗಿದ್ದಾರೆ.
ಈ ಸಮಸ್ಯೆ ಬಗ್ಗೆ ಮಾಜಿ ಶಾಸಕರೂ ಆದ ಕೆಪಿಸಿಸಿ ವಕ್ತಾರ ರಮೇಶ್ ಬಾಬು ಅವರು ರಾಜ್ಯ ಸರ್ಕಾರದ ಗಮನಸೆಳೆದಿದ್ದಾರೆ. ಈ ಕುರಿತಂತೆ ಅವರು ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಬರೆದಿರುವ ಪತ್ರ ಗಮನಸೆಳೆದಿದೆ. ಈ ಪತ್ರದಲ್ಲಿ ರಮೇಶ್ ಬಾಬು ಅವರು ಸರ್ಕಾರ ಮುಂದಾಲೋಚನೆ ಮಾಡದೆ ತರಾತುರಿಯಲ್ಲಿ ಆದೇಶ ನೀಡಿದರೆ ಜನರಿಗಾಗುವ ಸಂಕಷ್ಟ ಏನೆಂಬ ಬಗ್ಗೆ ಗಮನಸೆಳೆದಿದ್ದಾರೆ.
ನೆಟ್‍ಬ್ಯಾಂಕಿಂಗ್, ಫೋನ್ ಬ್ಯಾಂಕಿಂಗ್ ಸೌಲಭ್ಯ ಇಲ್ಲದವರು ಹಾಗೂ ಇದರ ಪರಿಣಿತಿ ಇಲ್ಲದವರು ಇಲಾಖೆಗೆ ಆನ್‍ಲೈನ್ ಪಾವತಿ ಮಾಡಲು ಸಮಸ್ಯೆ ಆಗುತ್ತಿರುವ ಬಗ್ಗೆ ಬೊಟ್ಟುಮಾಡಿದ್ದಾರೆ ಅಷ್ಟೇ ಆಲ್ಲ, ಈ ವ್ಯವಸ್ಥೆಯಿಂದಾಗಿ ಜನರು ದಲ್ಲಾಳಿಗಳನ್ನು ಅವಲಂಬಿತವಾಗಿದ್ದಾರೆ ಎಂಬ ಬಗ್ಗೆಯೂ ಗಮನಸೆಳೆದಿದ್ದಾರೆ. ಈ ಅವ್ಯವಸ್ಥೆಯನ್ನು ಸರಿಪಡಿಸಬೇಕೆಂದು ಅವರು ಈ ಪತ್ರದಲ್ಲಿ ಕಂದಾಯ ಸಚಿವರನ್ನು ಒತ್ತಾಯಿಸಿದ್ದಾರೆ.


ರಮೇಶ್ ಬಾಬು ಅವರು ಸರ್ಕಾರಕ್ಕೆ ಬರೆದ ಪತ್ರ ಹೀಗಿದೆ:
ಕರ್ನಾಟಕ ರಾಜ್ಯ ಸರ್ಕಾರದ ಕಂದಾಯ ಇಲಾಖೆಗೆ ಸೇರಿದ ಮಾನ್ಯ ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು ಉಪನೋಂದಣಿ ಕಚೇರಿಗಳಲ್ಲಿ ದಸ್ತಾವೇಜುಗಳನ್ನು ನೋಂದಾಯಿಸುವ ಸಂಬಂಧ ಸುತ್ತೋಲೆಯ ಆದೇಶ ಹೊರಡಿಸಿ ಮುದ್ರಾಂಕ ಶುಲ್ಕ ಹಾಗೂ ನೋಂದಾವಣಿ ಶುಲ್ಕಗಳನ್ನು ಆನ್‍ಲೈನ್ ಪಾವತಿ ಮುಖಾಂತರ ಪಡೆಯಲು ತಿಳಿಸಿರುತ್ತಾರೆ. ಇಲಾಖೆಯ ಕೆಲವು ಉಪನೋಂದಾವಣಿ ಅಧಿಕಾರಿಗಳು ಡಿಮ್ಯಾಂಡ್ ಡ್ರಾಪ್ಟ್/ಪೇ ಆರ್ಡರ್/ಚೆಕ್ ಮುಖಾಂತರ ಮಾಡಿದ ಪಾವತಿಗಳನ್ನು ದುರುಪಯೋಗ ಪಡಿಸಿಕೊಂಡ ಕಾರಣಕ್ಕಾಗಿ ಆನ್‍ಲೈನ್ ಪಾವತಿ ಜಾರಿಗೊಳಿಸಿರುವುದಾಗಿ ತಿಳಿಸಿರುತ್ತಾರೆ. ತಾವೂ ಇದನ್ನು ಅನುಮೋದಿಸಿರುತ್ತೀರಿ.
ಕರ್ನಾಟಕದಲ್ಲಿ ನೋಂದಾವಣಿ ಇಲಾಖೆ ರಾಜ್ಯ ಸರ್ಕಾರಕ್ಕೆ ಆದಾಯ ತುಂಬುವ ಮೂರನೇ ದೊಡ್ಡ ಇಲಾಖೆ ಆಗಿರುತ್ತದೆ. ಈ ಇಲಾಖೆಯಲ್ಲಿ ಪ್ರತಿ ವರ್ಷ ಲಕ್ಷಾಂತರ ದಾಖಲೆಗಳು ನೋಂದಾವಣಿ ಆಗುತ್ತವೆ. 2019-20ನೇ ಸಾಲಿನಲ್ಲಿ 19,57,833 ಆಸ್ತಿ ದಾಖಲೆ ನೋಂದಣಿ, 36,87,719 ಇ.ಸಿ, 9,93,573 ದೃಡೀಕೃತ ಪ್ರತಿ, 1,50,392 ಮದುವೆ ನೋಂದಣಿ ಹಾಗೂ ಇನ್ನಿತರ ಸಾರ್ವಜನಿಕ ದಾಖಲೆಗಳನ್ನು ನಿರ್ವಹಣೆ ಮಾಡಲಾಗಿದೆ. ಅದೇ ರೀತಿ ಪ್ರತಿ ವರ್ಷ ರೈತರ ಸಾಲ ಪತ್ರ, ಗೃಹನಿರ್ಮಾಣ ಸಾಲ ಪತ್ರ, ಕರಾರು ಪತ್ರ, ಸಂಘಸಂಸ್ಥೆ/ಟ್ರಸ್ಟ್‍ಗಳ ನೋಂದಣಿ ಪತ್ರ, ಸಾಲಬಿಡುಗಡೆ ಪತ್ರ ಮತ್ತು ಸರ್ಕಾರದ ಯೋಜನೆಗಳ ಹಂಚಿಕೆ ಪತ್ರ ಇತ್ಯಾದಿ ಲಕ್ಷಾಂತರ ಸಂಖ್ಯೆಯಲ್ಲಿ ನೋಂದಾವಣಿ ಆಗುತ್ತದೆ. ಪ್ರತಿದಿನ ಪ್ರತಿ ನೋಂದಾವಣಿ ಕಛೇರಿಯಲ್ಲಿ ಸಾವಿರಾರು ಮಂದಿ ತಮ್ಮ ದಾಖಲೆಗಳಿಗಾಗಿ ಎಡತಾಕುತ್ತಾರೆ. ಇಲಾಖೆಯು ಹೊಸದಾಗಿ ಕಡ್ಡಾಯಗೊಳಿಸಿರುವ ಮುದ್ರಾಂಕ ಶುಲ್ಕ, ನೋಂದಾವಣಿ ಶುಲ್ಕಗಳ ಹಾಗೂ ಕಡ್ಡಾಯ ಸೇವಾಶುಲ್ಕಗಳ ಪರಿಣಾಮವಾಗಿ ಜನಸಾಮಾನ್ಯರು ತೊಂದರೆಗೆ ಒಳಗಾಗಿದ್ದಾರೆ. ನೆಟ್‍ಬ್ಯಾಂಕಿಂಗ್/ಫೋನ್ ಬ್ಯಾಂಕಿಂಗ್ ಸೌಲಭ್ಯ ಇಲ್ಲದವರು ಹಾಗೂ ಇದರ ಪರಿಣಿತಿ ಇಲ್ಲದವರು ಇಲಾಖೆಗೆ ಆನ್‍ಲೈನ್ ಪಾವತಿ ಮಾಡಲು ಸಮಸ್ಯೆ ಆಗುತ್ತಿದ್ದು, ಅನಿವಾರ್ಯವಾಗಿ ದಲ್ಲಾಳಿಗಳ ಮೇಲೆ ಅವಲಂಬಿತವಾಗಿದ್ದಾರೆ.
ಪ್ರಮುಖವಾಗಿ ಹೊಸ ವ್ಯವಸ್ಥೆಯಿಂದ ಸಾರ್ವಜನಿಕರು ತಮ್ಮ ದಾಖಲೆಗಳನ್ನು ನೋಂದಾವಣಿ ಮಾಡಲು ಅಥವಾ ದೃಡೀಕೃತ ಪ್ರತಿಯನ್ನು ಪಡೆಯಲು ಎರಡರಿಂದ ಮೂರು ದಿನಗಳನ್ನು ವ್ಯಯ ಮಾಡಬೇಕಾಗಿದೆ. ಅಲ್ಲದೇ ಕೆಲವು ಸಾಲಪತ್ರದ ದಾಖಲೆಗಳಿಗೆ ಅಥವಾ ದೃಡೀಕೃತ ಪ್ರತಿಗಳಿಗೆ ನಿಗದಿತ ಶುಲ್ಕ ಒಂದುನೂರು ರೂಪಾಯಿಯಿಂದ ಐದುನೂರು ರೂಪಾಯಿಗಳಿದ್ದರೆ, ಸದರಿ ದಾಖಲೆಗಳನ್ನು ಪಡೆಯಲು ಸಾರ್ವಜನಿಕರು ಒಂದುಸಾವಿರ ರೂಪಾಯಿಯಿಂದ ಐದುಸಾವಿರ ರೂಪಾಯಿಯವರೆಗೆ ಖರ್ಚು ಮಾಡಬೇಕಾಗಿದೆ. ಸರ್ಕಾರದ ಹೊಸ ಆನ್‍ಲೈನ್ ನೀತಿ ಸಾರ್ವಜನಿಕರನ್ನು ಅತೀವ ತೊಂದರೆಗೆ ಈಡು ಮಾಡಿದೆ. ಕನಿಷ್ಠ ಐದುಸಾವಿರ ರೂಪಾಯಿಗಳವರೆಗೆ ಉಪನೋಂದಣಾ ಅಧಿಕಾರಿಗಳು ನಗದು ಪಡೆದು ರಸೀದಿ ನೀಡಲು ಅವಕಾಶ ಮಾಡಿದರೆ ಅನುಕೂಲವಾಗುತ್ತದೆ.
ಸರ್ಕಾರವು ಜನಸಾಮಾನ್ಯರ ತೊಂದರೆಗಳನ್ನು ಗಂಭೀರವಾಗಿ ಪರಿಗಣಿಸಿ ಹೊಸ ಆನ್‍ಲೈನ್ ಪಾವತಿ ನೀತಿಯನ್ನು ಹಿಂದಕ್ಕೆ ಪಡೆದು, ಸಾರ್ವಜನಿಕರು ಡಿಡಿ/ಪೇ ಆರ್ಡರ್/ಆರ್‍ಟಿಜಿಎಸ್ ಮುಖಾಂತರ ಶುಲ್ಕ ಪಾವತಿ ಮಾಡಲು ಅನುವು ಮಾಡಿಕೊಡಬೇಕು. ಉಪನೋಂದಣಾ ಅಧಿಕಾರಿಗಳು ಸಾರ್ವಜನಿಕ ಹಣವನ್ನು ದುರುಪಯೋಗ ಪಡೆಸಿಕೊಳ್ಳದಂತೆ ಪ್ರತಿ ದಿನದ ಶುಲ್ಕ ಪಾವತಿಯ ವಿವರಗಳನ್ನು ಲೆಕ್ಕಪರಿಶೋದಕರ ಮುಖಾಂತರ ಪರಿಶೀಲನೆ ಮಾಡಲು ಮತ್ತು ತಪ್ಪನ್ನು ಎಸಗಿದ್ದಲ್ಲಿ ಅಥವಾ ದುರುಪಯೋಗ ಮಾಡಿಕೊಂಡಲ್ಲಿ ಅವರನ್ನು ನಿಗದಿತ ಸಮಯದ ಇಲಾಖಾ ತನಿಕೆಗೆ ಒಳಪಡಿಸಿ, ಕರ್ತವ್ಯದಿಂದ ಬಿಡುಗಡೆ ಮಾಡಲು ಮತ್ತು ಹಣದ ಮರುವಸೂಲಾತಿಗೆ ಕ್ರಿಮಿನಲ್ ಪ್ರಕರಣದ ಮೂಲಕ ಅವಕಾಶ ಕಲ್ಪಿಸಿ ಕಾನೂನು ತಿದ್ದುಪಡಿ ಅವಶ್ಯಕವಾಗಿರುತ್ತದೆ. ಕೆಲವು ಅಧಿಕಾರಿಗಳ ತಪ್ಪಿಗಾಗಿ ಸಾರ್ವಜನಿಕರಿಗೆ ತೊಂದರೆ ಕೊಡುವ ಬದಲು, ನೋಂದಾವಣಿ ನಿಯಮಗಳನ್ನು ಸರಳಗೊಳಿಸಿ, ಸಾರ್ವಜನಿಕ ಹಣ ದುರುಪಯೋಗ ಆಗದಂತೆ ನಿಯಮಗಳನ್ನು ಬಿಗಿಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಬೇಕಿದೆ.