ನವದೆಹಲಿ: 2025-26ನೇ ಹಣಕಾಸು ವರ್ಷದಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳು (ಪಿಎಸ್‌ಬಿಗಳು) ಸಾರ್ವಕಾಲಿಕ ಗರಿಷ್ಠ ₹1.98 ಲಕ್ಷ ಕೋಟಿ ನಿವ್ವಳ ಲಾಭ ದಾಖಲಿಸಿವೆ. ಇದು ಸತತ ನಾಲ್ಕನೇ ವರ್ಷ ಪಿಎಸ್‌ಬಿಗಳು ಲಾಭದಲ್ಲಿ ಮುಂದಿದೆ.
ಮಂಗಳವಾರ ಬಿಡುಗಡೆಯಾದ ಅಧಿಕೃತ ಮಾಹಿತಿಯ ಪ್ರಕಾರ, ಪಿಎಸ್‌ಬಿಗಳ ಒಟ್ಟು ವ್ಯವಹಾರ ₹283.3 ಲಕ್ಷ ಕೋಟಿಗೆ ಏರಿಕೆಯಾಗಿ, ವರ್ಷದಿಂದ ವರ್ಷಕ್ಕೆ ಶೇ.12.8ರಷ್ಟು ಬೆಳವಣಿಗೆ ಕಂಡಿದೆ. ಠೇವಣಿಗಳು ₹156.3 ಲಕ್ಷ ಕೋಟಿಗೆ ತಲುಪಿದರೆ, ಒಟ್ಟು ಮುಂಗಡಗಳು ಶೇ.15.7ರಷ್ಟು ಏರಿಕೆ ಕಂಡು ₹127 ಲಕ್ಷ ಕೋಟಿಗೆ ತಲುಪಿವೆ.
ಬ್ಯಾಂಕುಗಳ ಆಸ್ತಿ ಗುಣಮಟ್ಟದಲ್ಲೂ ಗಮನಾರ್ಹ ಸುಧಾರಣೆ ಕಂಡುಬಂದಿದೆ. ಒಟ್ಟು ಎನ್‌ಪಿಎ ಅನುಪಾತ ಶೇ.1.93ಕ್ಕೆ ಇಳಿದಿದ್ದು, ನಿವ್ವಳ ಎನ್‌ಪಿಎ ಶೇ.0.39ರ ಐತಿಹಾಸಿಕ ಕನಿಷ್ಠ ಮಟ್ಟ ತಲುಪಿದೆ.
ಚಿಲ್ಲರೆ, ಕೃಷಿ ಹಾಗೂ ಎಂಎಸ್‌ಎಂಇ ವಲಯಗಳಲ್ಲಿ ಸಾಲ ವಿತರಣೆಯೂ ಉತ್ತಮ ಬೆಳವಣಿಗೆ ಕಂಡಿದೆ. ಚಿಲ್ಲರೆ ಸಾಲ ಶೇ.18.1, ಕೃಷಿ ಸಾಲ ಶೇ.15.5 ಹಾಗೂ ಎಂಎಸ್‌ಎಂಇ ಸಾಲ ಶೇ.18.2ರಷ್ಟು ಹೆಚ್ಚಾಗಿದೆ.
ಪಿಎಸ್‌ಬಿಗಳ ಒಟ್ಟು ಕಾರ್ಯಾಚರಣಾ ಲಾಭ ₹3.21 ಲಕ್ಷ ಕೋಟಿಯಾಗಿದ್ದು, ಸ್ಲಿಪೇಜ್ ಅನುಪಾತ ಶೇ.0.7ಕ್ಕೆ ಇಳಿದಿದೆ. ರೈಟ್‌ಆಫ್ ಖಾತೆಗಳನ್ನು ಒಳಗೊಂಡಂತೆ ₹86,971 ಕೋಟಿ ವಸೂಲಾತಿಯಾಗಿದೆ.
ಬಂಡವಾಳ ಸ್ಥಿತಿಯೂ ಸುಧಾರಿಸಿಕೊಂಡಿದ್ದು, ಸಿಆರ್‌ಎಆರ್ ಅನುಪಾತ ಶೇ.16.6ಕ್ಕೆ ಏರಿಕೆಯಾಗಿದೆ. ಉತ್ತಮ ಆಡಳಿತ, ತಂತ್ರಜ್ಞಾನ ಅಳವಡಿಕೆ ಹಾಗೂ ಸಾಲ ಶಿಸ್ತಿನಿಂದ ಬ್ಯಾಂಕುಗಳ ಕಾರ್ಯಕ್ಷಮತೆ ಹೆಚ್ಚಾಗಿದೆ ಎಂದು ಸರ್ಕಾರ ತಿಳಿಸಿದೆ
























































