(ದೆಹಲಿ ಪ್ರತಿನಿಧಿ ವರದಿ)
ದೆಹಲಿ: ಮಂಗಳೂರು ಹೊರವಲಯದ ಹೆದ್ದಾರಿ ಟೋಲ್ಗಳು ಒಂದಿಲ್ಲೊಂದು ಅವಾಂತರಕ್ಜೆ ಸಾಕ್ಷಿಯಾಗುತ್ತಲೇ ಇವೆ. ಈ ವಿಚಾರ ಸಾರ್ವಜನಿಕ ವಲಯದಲ್ಲೂ ಆಕ್ರೋಶಕ್ಕೆ ಗುರಿಯಾಗುತ್ತಿದೆ. ಅದರಲ್ಲೂ ಸುರತ್ಕಲ್ ಬಳಿಯ ಟೋಲ್ ಸಮಸ್ಯೆ ಮುಗಿಯದ ಕಥೆ ಎಂಬಂತಿದೆ.
ಇದೀಗ ಸಾರ್ವಜನಿಕರ ಒತ್ತಡಕ್ಕೆ ಮಣಿದಿರುವ ಮಂಗಳೂರು ಸಂಸದರೂ ಆದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಖಾಡಕ್ಕೆ ಇಳಿದಿದ್ದು ಸುರತ್ಕಲ್ ಸಮೀಪದ ಟೋಲ್ ವ್ಯವಸ್ಥೆಯನ್ನೇ ರದ್ದುಗೊಳಿಸುವ ಸಂಬಂಧ ಪ್ರಕ್ರಿಯೆ ಆರಂಭಿಸಿದ್ದಾರೆ. ಈ ಸಂಬಂಧ ದೆಹಲಿಯಲ್ಲಿ ನಡೆದ ಸಭೆ ವಿದ್ಯಮಾನಗಳ ಕೇಂದ್ರಬಿಂದುವಾಯಿತು.
ಮಂಗಳೂರು-ಉಡುಪಿಯನ್ನು ಹೆದ್ದಾರಿ ಮಧ್ಯೆ ಬರುವ ಸುರತ್ಕಲ್ ಟೋಲ್ ಗೇಟ್ನ್ನು ರದ್ದುಪಡಿಸುವ ಬಗ್ಗೆ ದೆಹಲಿಯಲ್ಲಿ ಕಾರ್ಯತಂತ್ರ ರೂಪಿಸುತ್ತಿರುವ ನಳಿನ್ ಕುಮಾರ್ ಅವರು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಮೇಲಿಂದ ಮೇಲೆ ಒತ್ತಡ ಹೇರುತ್ತಿದ್ದಾರೆ. ಈ ಸಂಬಂಧ ಸಚಿವ ಗಡ್ಕರಿ ಅವರು ಪ್ರಕ್ರಿಯೆಗೆ ಮುನ್ನುಡಿ ಬರೆದಿದ್ದಾರೆ.
ಈ ವಿಚಾರ ಸಂಬಂಧ ಶೀಘ್ರವೇ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ವಿಶೇಷ ಸಭೆ ಕರೆಯುವುದಾಗಿ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ನಳಿನ್ ಕುಮಾರ್ಗೆ ಭರವಸೆ ನೀಡಿದ್ದಾರೆ.
ದೆಹಲಿಯಲ್ಲಿರುವ ಕೇಂದ್ರ ಸಚಿವರ ನಿವಾಸದಲ್ಲಿ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ರಾಜ್ಯದ ಸಂಸದರು ಗಡ್ಕರಿ ಉಪಸ್ಥಿತಿಯಲ್ಲಿ ಜೊತೆ ಸಭೆ ನಡೆಸಿ, ಸುರತ್ಕಲ್ ಟೋಲ್ ಗೇಟ್ ರದ್ದತಿಯ ಔಚಿತ್ಯದ ಬಗ್ಗೆ ಗಮನಸೆಳೆದರು. ಈ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದಂತೆ ರಾಜ್ಯದ ಹಲವಾರು ವಿಷಯಗಳನ್ನು ಚರ್ಚಿಸಲಾಯಿತು. ಈ ವೇಳೆ ಕೇಂದ್ರ ಸಚಿವರ ಹಲವು ಯೋಜನೆಗಳ ಬಗ್ಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.
ಈ ವೇಳೆ ಮಾತನಾಡಿದ ಗಡ್ಕರಿ, ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬಿ.ಸಿ.ರೋಡ್-ಅಡ್ಡಹೊಳೆ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿ 169 ಸಣ್ಣೂರು- ಬಿಕರ್ನಕಟ್ಟೆ ರಸ್ತೆ ಚತುಷ್ಪಥ ಕಾಮಗಾರಿಗೆ ಈಗಾಗಲೇ ಟೆಂಡರ್ ಪೂರ್ಣಗೊಂಡಿದೆ. ಭಾರತ್ ಮಾಲಾ ಯೋಜನೆಯಡಿ ದ್ವಿಪಥ ರಸ್ತೆಯಾಗಿರುವ ಮುಲ್ಕಿ- ಕಟೀಲು- ಕೈಕಂಬ- ಪೊಳಲಿ- ಬಿ.ಸಿ.ರೋಡು- ಪಾಣೆಮಂಗಳೂರು- ತೊಕ್ಕೊಟ್ಟು ಸಂಪರ್ಕಿಸುವ ಮಂಗಳೂರು ನಗರ ಹೊರವರ್ತುಲ ರಸ್ತೆಯನ್ನು ಚತುಷ್ಪಥವಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿಯನ್ನು ಶೀಘ್ರ ಅನುಷ್ಠಾನಗೊಳಿಸಲು ಶೀಘ್ರ ಕ್ರಮವಹಿಸುವುದಾಗಿ ಪ್ರಕಟಿಸಿದರು.
ಮಂಗಳೂರು- ಬೆಂಗಳೂರು ಸಂಪರ್ಕಿಸಲು ಪರ್ಯಾಯ ರಸ್ತೆಯಾದ ಮಾಣಿ- ಮೈಸೂರು ರಾಜ್ಯ ಹೆದ್ದಾರಿಯನ್ನು ಮಾಣಿಯಿಂದ ಕುಶಾಲನಗರ ದವರೆಗೆ ಚತುಷ್ಪಥವಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿಯನ್ನು ಪರಿಗಣಿಸುವುದಾಗಿಯೂ ನಳಿನ್ ಕುಮಾರ್ ಕಟೀಲ್ ಅವರಿಗೆ ಗಡ್ಕರಿ ಭರವಸೆ ನೀಡಿದರು.