ದೆಹಲಿ: ಕಳೆದ ಅವಧಿಯಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕನಾಗಿ ಮೋದಿ ಸರ್ಕಾರದ ಲೋಪಗಳ ವಿರುದ್ದ ವಾಕ್ಪ್ರಹಾರ ಮಾಡಿ ಆಡಳಿತ-ಪ್ರತಿಪಕ್ಷಗಳಿಂದ ಮೆಚ್ಚುಗೆ ಗಳಿಸಿದ್ದ ಸಂಸದೀಯ ಪಟು ಮಲ್ಲಿಕಾರ್ಜುನ ಖರ್ಗೆ ಅವರು ಇನ್ನು ಮುಂದೆ ಮೇಲ್ಮನೆಯಲ್ಲಿ ಆ ಕೆಲಸ ನಿರ್ವಹಿಸಲಿದ್ದಾರೆ.
ಮಹತ್ವದ ನಿರ್ಧಾರವೊಂದರಲ್ಲಿ ಕಾಂಗ್ರೆಸ್ ಪಕ್ಷ ಕರ್ನಾಟಕದ ಮುತ್ಸದ್ದಿ ರಾಜಕೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜ್ಯಸಭೆಯ ಪ್ರತಿಪಕ್ಷ ನಾಯಕನನ್ನಾಗಿ ಆಯ್ಕೆ ಮಾಡಿದೆ.
ಹಿರಿಯ ಸಂಸದ ಗುಲಾಮ್ ನಭಿ ಆಜಾದ್ ಅವರ ಸದಸ್ಯತ್ವ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ತೆರವುಗೊಂಡಿರುವ ರಾಜ್ಯಸಭೆ ವಿಪಕ್ಷ ನಾಯಕನ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್ ನೇಮಕ ಮಾಡಿದೆ.
ಈ ತಿಂಗಳ 15ರಂದು ಗುಲಾಂ ನಭಿ ಆಜಾದ್ ಅವರು ರಾಜ್ಯಸಭೆ ಸದಸ್ಯತ್ವದಿಂದ ನಿವೃತ್ತರಾಗಲಿದ್ದು, ಅವರು ನಿರ್ವಹಿಸುತ್ತಿದ್ದ ರಾಜ್ಯಸಭೆಯಲ್ಲಿ ವಿಪಕ್ಷ ನಾಯಕನ ಸ್ಥಾನವೂ ತೆರವಾಗಲಿದೆ. ಆ ಸ್ಥಾನವನ್ನು ಖರ್ಗೆಯವರು ತುಂಬಲಿದ್ದಾರೆ.