ಬೆಂಗಳೂರು: ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಜಮೀರ್ ಅಹ್ಮದ್ ಅವರಿಗೆ ಇಂದು ಬೆಳ್ಳಂ ಬೆಳಿಗ್ಗೆ ಇಡಿ ಶಾಕ್. ಮುಂಜಾನೆ 6 ಗಂಟೆ ಸುಮಾರಿಗೆ ಜಮೀರ್ ಅಹ್ಮದ್ ಅವರ ಬೆಂಗಳೂರಿನ ನಿವಾಸ, ಅವರ ಮಾಲೀಕತ್ವದ್ದೆಂದು ಹೇಳಲಾದ ನ್ಯಾಷನಲ್ ಟ್ರಾವೆಲ್ಸ್ ಕಚೇರಿ ಮೇಲೆ, ವಿವಿಧ ಫ್ಲಾಟ್ ಮೇಲೆ ಏಕಕಾಲದಲ್ಲಿ ಅಧಿಕಾರಿಗಳು ಲಗ್ಗೆ ಹಾಕಿ ಪರಿಶೀಲನೆ ನಡೆಸಿದ್ದಾರೆ.
ಆದಾಯಕ್ಕಿಂತ ಹೆಚ್ಚಿನ ಆಸ್ತಿ, ಅಕ್ರಮ ಹಣ ವಹಿವಾಟು ಕುರಿತ ತನಿಖೆಯ ಅಖಾಡದಲ್ಲಿರುವ ಐಟಿ ಅಧಿಕಾರಿಗಳು, ಜಮೀರ್ ಅವರ ಮನೆಯತ್ತ ಚಿತ್ತ ಹರಿಸಿದ್ದಾರೆ. ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣ ಸಮೀಪ ಸುಮಾರು ಅರ್ಧ ಎಕರೆ ನಿವೇಶನದಲ್ಲಿ ಭವ್ಯ ಬಂಗಲೆಯನ್ನು ಜಮೀರ್ ಅಹ್ಮದ್ ಹೊಂದಿದ್ದಾರೆ. ಅರಮನೆ ರೀತಿಯಲ್ಲಿರುವ ಈ ಮನೆಯಲ್ಲಿ ಆಮದು ಮಾಡಿಕೊಂಡಿರುವ ಬೆಲೆಬಾಳುವ ವಸ್ತುಗಳೂ ಇವೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಈ ಬಗ್ಗೆಯೂ ಅಧಿಕಾರಿಗಳು ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಕೆಲ ಸಮಯದ ಹಿಂದಷ್ಟೇ ಜಮೀರ್ ಅಹ್ಮದ್ ಪುತ್ರಿಯ ವಿವಾಹ ನೆರವೇರಿತ್ತು. ಅತ್ಯಂತ ವೈಭವದಿಂದ ವಿವಾಹ ನೆರವೇರಿತ್ತು. ಆ ಸಂದರ್ಭದಲ್ಲೇ ಹಣಕಾಸು ವಹಿವಾಟು ಬಗ್ಗೆ ಐಟಿ ಅಧಿಕಾರಿಗಳು ಮಾಹಿತಿ ಕಲೆಹಾಕುವ ಪ್ರಕ್ರಿಯೆಗೆ ಮುನ್ನುಡಿ ಬರೆದಿದ್ದರು. ಐಎಂಎ ಹಗರಣದ ಸಂದೃಭದಲ್ಲೂ ಜಮೀರ್ ಅಹ್ಮದ್ ಬಗ್ಗೆ ತನಿಖೆ ಸಾಧ್ಯತೆಗಳ ಬಗ್ಗೆ ಮಾತುಗಳು ಹರಿದಾಡಿತ್ತು. ಆ ಸಂದರ್ಭದಲ್ಲಿ ಅವರು ಸಿಎಂ ಆಗಿದ್ದ ಯಡಿಯೂರಪ್ಪ ಆಪ್ತರನ್ನು ಭೇಟಿಯಾಗುತ್ತಿದ್ದ ವೈಖರಿ ಕೂಡಾ ಅನುಮಾನಕ್ಕೆ ಕಾರಣವಾಗಿತ್ತು.
ಅಷ್ಟೇ ಅಲ್ಲ, ಪುತ್ರಿಯ ವಿವಾಹ ಸಿದ್ದತೆಯ ಸಂದರ್ಭದಲ್ಲೇ ತಾವು ಪ್ರತಿನಿಧಿಸುತ್ತಿರುವ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗಾಗಿ ಸುಮಾರು 200 ಕೋಟಿ ರೂಪಾಯಿ ಮಂಜೂರಾತಿಗೆ ಬಿಎಸ್‌ವೈ ಅವರ ಮನವೊಲಿಸಿದ್ದರು. ಸಿಎಂ ಕೂಡಾ ಮಂಜೂರಾತಿ ಪ್ರಕ್ರಿಯೆಗೆ ಸೂಚಿಸಿದ್ದರು. ಆ ವೇಳೆ ಬಿಜೆಪಿ ಶಾಸಕರೇ ಇದಕ್ಕೆ ತಕರಾರು ಎತ್ತಿದ್ದರಿಂದ ಸಿಎಂ ಅವರ ಕಚೇರಿ ಈ ಸಂಬಂಧದ ಪ್ರಕ್ರಿಯೆಯನ್ನು ತಡೆಹಿಡಿದಿತ್ತು.
ಈ ನಡುವೆ ಜಮೀರ್ ಅಹ್ಮದ್ ಅವರ ಒಟ್ಟಾರೆ ಆಸ್ತಿ ಪಾಸ್ತಿ, ಹಾಗೂ ಒಟ್ಟಾರೆ ಹಣಕಾಸು ವಹಿವಾಟು ಪರಿಶೀಲನೆಗೆ ಇಡಿ ಅಧಿಕಾರಿಗಳು ಅಖಾಡಕ್ಕಿಳಿದಿರುವುದು ಅಚ್ಚರಿ ಹಾಗೂ ಕುತೂಹಲಕ್ಕೆ ಕಾರಣವಾಗಿದೆ.