ಬೆಂಗಳೂರು: ಪ್ರಯಾಣಿಕ ಸ್ನೇಹಿ ಕ್ರಮಕ್ಕೆ ಆದ್ಯತೆ ನೀಡುವ ಮೂಲಕ ಗಮನಸೆಳೆದಿರುವ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಕೆಎಸ್ಸಾರ್ಟಿಸಿ ಸಹಿತ ಸಾರಿಗೆ ನಿಗಮಗಳಲ್ಲಿನ ಪ್ರಯಣದರವನ್ನು ತರಾತುರಿಯಲ್ಲಿ ಹೆಚ್ಚಳ ಮಾಡದಂತೆ ನಿರ್ದೇಶನ ನೀಡಿದ್ದಾರೆ.
ಈ ಕುರಿತಂತೆ ಮಾಧ್ಯಮಗಳ ಜೊತೆ ಮಾಹಿತಿ ಹಂಚಿಕೊಂಡಿರುವ ಸಚಿವ ರಾಮಲಿಂಗ ರೆಡ್ಡಿ, ಬಸ್ ಪ್ರಯಾಣ ದರ ಹೆಚ್ಚಳ ಸಂಬಂಧ ಯಾವುದೇ ಸಾರಿಗೆ ನಿಗಮಗಳು ಪ್ರಸ್ತಾವನೆ ಸಲ್ಲಿಸಿಲ್ಲ ಎಂದೂ ತಿಳಿಸಿದ್ದಾರೆ. ತರಾತುರಿಯಲ್ಲಿ ಟಿಕೆಟ್ ದರ ಹೆಚ್ಚಳ ಮಾಡುವ ವಿಚಾರ ಸಾರಿಗೆ ಇಲಾಖೆಯ ಮುಂದೆ ಇಲ್ಲ ಎಂದೂ ಸ್ಪಷ್ಟನೆ ನೀಡಿದ್ದಾರೆ.
ರಾಜ್ಯದ ಸಾರಿಗೆ ವ್ಯವಸ್ಥೆಯಲ್ಲಿ ಸುರಕ್ಷಾ ಕ್ರಮಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದ ಸಚಿವರು, ರಾಜ್ಯದಲ್ಲಿ 47,64,293 ವಾಹನಗಳಿಗೆ HSRP ನೋಂದಣಿ ಫಲಕಗಳನ್ನು ಅಳವಡಿಸಲಾಗಿದ್ದು, ನೋಂದಣಿಗೆ ಸೆಪ್ಟೆಂಬರ್ 15ರ ವರೆಗೆ ಗಡುವು ವಿಸ್ತರಿಸಲಾಗಿದೆ ಎಂದು ವಿವರಿಸಿದರು.
ಸಾರಿಗೆ ಇಲಾಖೆಯಲ್ಲಿ ಸುಮಾರು 1,349 ಹುದ್ದೆ ಖಾಲಿ ಇದ್ದು, ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಜೊತೆಗೆ ಮೋಟಾರು ವಾಹನಗಳ ನಿರೀಕ್ಷಕರ ಹುದ್ದೆಗಳಿಗೆ ಶೀಘ್ರ ನೇರ ನೇಮಕ ಮಾಡಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.