ಈಶ್ವರಪ್ಪನವರ ಅಭಿಮಾನಕ್ಕೆ ನಾನು ಋಣಿ.. ರಾಜ್ಯದಲ್ಲಿ ಬಿಜೆಪಿಯನ್ನು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ತರುವುದು ನಮ್ಮ ಮುಂದಿನ ಗುರಿ.. ಕನಿಷ್ಟ 120 ಸ್ಥಾನಗಳನ್ನು ಬಿಜೆಪಿ ಗೆಲ್ಲುವ ಹೆಗ್ಗುರಿ.. ನೀಡಿರುವ ಇಲಾಖೆಯಲ್ಲೇ ನಾನು ಸಂತೃಪ್ತಿ.. ಸಚಿವ ನಿರಣಿ ಹೇಳಿಕೆ..
ಬಾಗಲಕೋಟೆ: ತಾವು ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ನನ್ನ ಮೇಲೆ ಪ್ರೀತಿ, ವಿಶ್ವಾಸವಿಟ್ಟು ಅವರು ಹೇಳಿರಬಹುದು ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನನ್ನ ತವರು ಕ್ಷೇತ್ರವಾದ ಬೀಳಗಿಯಲ್ಲಿ ಭಾನುವಾರ ಬಿಜೆಪಿಯ ಹಿಂದುಳಿದ ವರ್ಗಗಳ ಮೊರ್ಚಾ ಸಭೆಯನ್ನು ಆಯೋಜಿಸಲಾಗಿತ್ತು .ಆ ವೇಳೆ ಮಾತನಾಡುವಾಗ ಈಶ್ವರಪ್ಪನವರು ನಾನು ಮುಂದಿನ ಸಿಎಂ ಎಂದು ಹೇಳಿದ್ದರು. ಇದು ಮಾಧ್ಯಮಗಳಲ್ಲಿ ವರದಿಯಾಗಿರುವುದನ್ನು ಗಮನಿಸಿದ್ದೇನೆ ಎಂದು ಸ್ಪಷ್ಟನೆ ನೀಡಿದರು.
ಕಳೆದ ಹಲವು ವರ್ಷಗಳಿಂದ ನಾವು ಮಾಡಿಕೊಂಡು ಬಂದಿರುವ ಸಾರ್ವಜನಿಕ ಸೇವೆ, ಜನಪರ ಕಾರ್ಯಕ್ರಮಗಳನ್ನು ಮೆಚ್ಚಿ ಅವರು ಅಭಿಮಾನದಿಂದ ಹೇಳಿರಬಹುದೆಂದು ಅಭಿಪ್ರಾಯಪಟ್ಟರು.
ಕಳೆದ 5 ದಶಕಗಳಿಂದ ರಾಜ್ಯದಲ್ಲಿ ಮಾಜಿ ಸಿಎಂ ಹಾಗೂ ನಮ್ಮ ನಾಯಕರಾದ ಯಡಿಯೂರಪ್ಪ, ಕೇಂದ್ರ ಮಾಜಿ ಸಚಿವ ದಿವಂಗತ ಅನಂತಕುಮಾರ್ ಅವರ ಜೊತೆ ಈಶ್ವರಪ್ಪನವರು ರಾಜ್ಯದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಅವರೊಬ್ಬ ಹಿರಿಯ ನಾಯಕರು. ನನ್ನ ಮೇಲಿನ ಅಭಿಮಾನಕ್ಕೆ ನಾನು ಚಿರರುಣಿ ಎಂದು ನಿರಾಣಿ ಅವರು ಭಾವುಕರಾಗಿ ಹೇಳಿದರು.
ನನಗೆ ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಗಣಿ ಖಾತೆಯನ್ನು ನೀಡಿದ್ದರು. ಈಗ ಬಸವರಾಜ ಬೊಮ್ಮಾಯಿ ಅವರು ಕೈಗಾರಿಕೆ ಖಾತೆಯನ್ನು ನೀಡಿದ್ದಾರೆ. ಯಾವುದೇ ಖಾತೆ ನೀಡಿದರೂ ನಾನು ತೃಪ್ತಿಯಿಂದ ಕೆಲಸ ಮಾಡುತ್ತೇನೆ. ಈಗಲೂ ಅತ್ಯಂತ ಸಂತೋಷದಿಂದ ಇಲಾಖೆಯನ್ನು ನಿರ್ವಹಣೆ ಮಾಡುತ್ತಿದ್ದೇನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಂಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ತರುವುದೇ ನಮ್ಮ ಮುಂದಿನ ಗುರಿ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಇಂದಿಲ್ಲಿ ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಯಕತ್ವಕ್ಕೆ ನಾವೆಲ್ಲರೂ ಸಾಥ್ ನೀಡಿ 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಕನಿಷ್ಠ 120 ಸ್ಥಾನಗಳನ್ನು ಗೆದ್ದು ಮತ್ತೆ ಅಧಿಕಾರಕ್ಕೆ ತರುವುದೇ ನಮ್ಮ ಮುಂದಿನ ಸವಾಲು ಎಂದು ತಿಳಿಸಿದರು.
2024ರ ಲೋಕಸಭೆ ಚುನಾವಣೆಯಲ್ಲಿ ಪುನಃ 25 ಸ್ಥಾನಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು. ಈಗಾಗಲೇ ಈ ಹಿಂದಿನ ಚುನಾವಣೆಯಲ್ಲಿ 25 ಸ್ಥಾನಗಳನ್ನು ಗೆದ್ದಿದ್ದೇವೆ. ಮತ್ತೆ ಅದಕ್ಕಿಂತಲೂ ಹೆಚ್ಚಿನ ಸ್ಥಾನ ಗೆಲ್ಲಲ್ಲು ಕಾರ್ಯತಂತ್ರವನ್ನು ರೂಪಿಸಿದ್ದೇವೆ ಎಂದರು.
ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಕೋವಿಡ್‍ನಿಂದ ಹಿಡಿದು ರಾಜ್ಯದಲ್ಲಿ ಪ್ರವಾಹ ಉಂಟಾದ ವೇಳೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜನರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಒಂದು ಕಡೆ ಕೋವಿಡ್ ನಿರ್ವಹಣೆ ಮತ್ತೊಂದು ಕಡೆ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ ಜನತೆಯನ್ನು ರಕ್ಷಣೆ ಮಾಡಿ ಅವರಿಗೆ ಪರಿಹಾರಗಳನ್ನು ಒದಗಿಸಲಾಗಿದೆ. ಜೊತೆಗೆ ಜೊತೆಗೆ ರಾಜ್ಯದ ಅಭಿವೃದ್ಧಿ ಕಡೆಯೂ ವಿಶೇಷ ನಿಗಾ ವಹಿಸಲಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ಎಲ್ಲಿಯೂ ಹಿನ್ನಡೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.