ದೆಹಲಿ: ಅಯೋಧ್ಯೆ ಶ್ರೀರಾಮ ಜನ್ಮ ಭೂಮಿ ಮುಕ್ತಿ, ಕಾಶೀ ವಿಶ್ವನಾಥ ದೇವಾಲಯಕ್ಕೆ ಶಕ್ತಿ, ಹೀಗೆ ಹಿಂದೂ ಸಂಘಟನೆಗಳ ಹೋರಾಟದದ ಸಂಕೀರ್ಣ ಸನ್ನಿವೇಶಗಳಲ್ಲಿ ಶಕ್ತಿ ಪ್ರದರ್ಶನ ಮಾಡುತ್ತಿದ್ದ ನಾಗಸಾಧುಗಳೇ ಇದೀಗ ಸಂಘಟನೆಗಳ ಸಾರಥಿಯಾಗುತ್ತಿದ್ದಾರೆ. ‘ಭೈರವ್ ಸೇನೆ’ ಇದಕ್ಕೆ ಸಾಕ್ಷಿಯಾಗಿದೆ. ಉತ್ತರ ಭಾರತ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಪ್ರಭಾವಿ ಹಿಂದೂ ಸಂಘಟನೆಯಾಗಿರುವ ‘ಭೈರವ್ ಸೇನೆ’ಯ ರಾಷ್ಟ್ರೀಯ ಗೌರವಾಧ್ಯಕ್ಷರನ್ನಾಗಿ ಕರ್ನಾಟಕ ಮೂಲದ ನಾಗಾಸಾಧು, ತಪೋನಿಧಿ ಬಾಬಾ ಶ್ರೀ ವಿಠ್ಠಲ್ ಗಿರಿ ಜಿ ಮಹಾರಾಜ್ ಅವರನ್ನು ಆಯ್ಕೆ ಮಾಡಲಾಗಿದೆ.
ಭೈರವ್ ಸೇನಾದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯು ಉತ್ತರಾಖಂಡದ ಜ್ವಲಾಪುರ್‌ನ ತ್ರಿದೇವ್ ಮಂದಿರದಲ್ಲಿ ನೆರವೇರಿತು. ಧಾರ್ಮಿಕ ಸಭೆಯ ರೂಪದಲ್ಲಿ ನಡೆದ ಈ ಬೈಠಕ್‌ನಲ್ಲಿ ‘ಭೈರವ್ ಸೇನಾ’ದ ರಾಷ್ಟ್ರೀಯ ಪ್ರಮುಖರನೇಕರು ಭಾಗವಹಿಸಿದ್ದರು. ಈ ಮಹತ್ವದ ಸಭೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಾಜಿ ಪ್ರಚಾರಕ್, ಕರ್ನಾಟಕ ಮೂಲದ ನಾಗಸಾಧು ತಪೋನಿಧಿ ಬಾಬಾ ಶ್ರೀ ವಿಠ್ಠಲ್ ಗಿರಿ ಜಿ ಮಹಾರಾಜ್ ಅವರನ್ನು ರಾಷ್ಟ್ರೀಯ ಗೌರವಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಯಾರು ಈ ಬಾಬಾ ಶ್ರೀವಿಠ್ಠಲ್ ಗಿರಿ ಜಿ ಮಹಾರಾಜ್..?
ಇವರ ಮೂಲ ಹೆಸರು ವಿಠಲ್. ದಕ್ಷಿಣ ಕನ್ನಡ ಮೂಲದ ಇವರು ಆರೆಸ್ಸೆಸ್‌ನ ಪೂರ್ಣಾವಧಿ ಕಾರ್ಯಕರ್ತರಾಗಿ ಹಿಂದೂ ಸಂಘಟನೆಗಳನ್ನು ಕಟ್ಟಿದವರು. ಸಂಘಟನೆಯ ಕೆಲಸಕ್ಕೆ ಮೀಸಲಿಟ್ಟ ಅವಧಿ ಕ್ರಮಿಸಿದ ನಂತರ, ಕೆಲವು ವರ್ಷಗಳ ಹಿಂದೆ ಹಿರಿಯ ಸಂತ, ಶ್ರೀ ಪರಮಹಂಸ ಬಾಬಾ ಬಣ್ಖಂಡಿ ಜಿ ಮಹಾರಾಜ್ ಅವರ ಶಿಷ್ಯರಾಗಿ ದೀಕ್ಷೆ ಪಡೆದರು. ನಂತರ ವಿಠ್ಠಲ್‌ಗಿರಿ ಮಹಾರಾಜ್ ಅವರು ಉತ್ತರಖಂಡ್‌ನ ಪುಣ್ಯಕ್ಷೇತ್ರಗಳಾಶ್ರಮಗಳಲ್ಲಿ ತಪೋನಿರತರಾಗಿದ್ದಾರೆ. ಮೋದಿ, ಸುಷ್ಮಾ, ಜೇಟ್ಲಿ ಸಹಿತ ಹಿರಿಯ ನಾಯಕರ ಗುರು ಎಂದೇ ಪರಮಹಂಸ ಬಾಬಾ ಬಣ್ಖಂಡಿ ಜಿ ಮಹಾರಾಜ್ ಗುರುತಿಸಿಕೊಂಡವರು.
ಡಿಸೆಂಬರ್ 16ರಂದು ಹರಿದ್ವಾರದಿಂದ ಬೆಂಗಳೂರಿಗೆ ಆಗಮಿಸಲಿರುವ ವಿಠಲ್‌ಗಿರಿ ಮಹಾರಾಜ್ ಅವರು, ಡಿ.17ರಂದು ಜೆ.ಪಿ ನಗರದ ಬ್ರಾಹ್ಮಣ ಸಮಾಜ ಮಂದಿರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಡಿ.18ರಂದು ಬೆಂಗಳೂರು ಭಕ್ತವೃಂದದಿಂದ ನಡೆಯುವ ಗುರು ಪೂಜೆಯಲ್ಲಿ ಭಾಗಿಯಾಗಲಿದ್ದು, ಮರುದಿನ ಚಿಕ್ಕಮಗಳೂರಿನ ದತ್ತಪೀಠಕ್ಕೆ ಭೇಟಿಯಾಗಿ ದತ್ತಮಾಲಾಧಾರಿಗಳನ್ನು ಆಶೀರ್ವದಿಸಲಿದ್ದಾರೆ.
ಡಿ.20ರಂದು ಛತ್ರಪತಿ ಶಿವಾಜಿ ಸೇವಾ ಬಳಗ ಕರ್ನಾಟಕದ ತಂಡದೊಂದಿಗೆ ಬಾಬಾ ಅವರ ತವರು ಮಂಗಳೂರಿಗೆ ತೆರಳಿ, ಪೊಳಲಿ, ಮೂಡುಬಿದಿರೆ, ಉಡುಪಿಯ ವಿವಿಧೆಡೆ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಡಿ.22ರಂದು ಹಾಸನ, ಮೈಸೂರು, ತುಮಕೂರು, ಹಾವೇರಿ, ಬೆಳಗಾವಿ, ದಾವಣಗೆರೆಯ ವಿವಿಧೆಡೆ ಧಾರ್ಮಿಕ ಕೈಂಕರ್ಯಗಳಲ್ಲಿ ಭಾಗಿಯಾಗಲಿದ್ದಾರೆ.
ಜನವರಿ 1ರಂದು ರಾಮೇಶ್ವರಂ ಜ್ಯೋತಿರ್ಲಿಂಗ, ಕಂಚಿ, ಕಾಮಕೋಟಿ ದರ್ಶನ ಪಡೆಯಲಿದ್ದಾರೆ ಎಂದು ಅವರ ಆಪ್ತ ಶಾಖೆಯ ಪ್ರಮುಖರು ತಿಳಿಸಿದ್ದಾರೆ.