ಬೆಂಗಳೂರು: ಪ್ರತಿವರ್ಷ ಕೋಟ್ಯಂತರ ಜನರು ಭೇಟಿ ನೀಡುವ ಸವದತ್ತಿ ಯಲ್ಲಮ್ಮ ದೇವಸ್ಥಾನ ಹಾಗೂ ಯಲ್ಲಮ್ಮ ಗುಡ್ಡದ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಫ್ಲ್ಯಾನ್ ರೂಪಿಸಲಾಗುವುದು ಎಂದು ಸಾರಿಗೆ ಹಾಗೂ ಮುಜರಾಯಿ ಇಲಾಖೆಯ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಸೋಮವಾರ ಭೇಟಿ ನೀಡಿ ದೇವಿ ದರ್ಶನ ಪಡೆದು ಅಧಿಕಾರಿಗಳ ಸಭೆಯನ್ನು ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಉತ್ತರ ಕರ್ನಾಟಕದ ಅತ್ಯಂತ ಪ್ರಸಿದ್ದ ಧಾರ್ಮಿಕ ಸ್ಥಳವಾಗಿರುವ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಕೋಟ್ಯಂತರ ಜನರು ಭೇಟಿ ನೀಡುತ್ತಾರೆ ಎಂದರು.
ಜಾತ್ರೆ ಸಂದರ್ಭದಲ್ಲಿ ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಒದಗಿಸುವುದರ ಜತೆಗೆ ಲಕ್ಷಾಂತರ ಜನರಿಗೆ ಸುಗಮ ದರ್ಶನಕ್ಕೆ ಅನುಕೂಲವಾಗುವಂತೆ ಮಾಸ್ಟರ್ ಪ್ಲಾನ್ ರೂಪಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದವರು ತಿಳಿಸಿದರು.
ನಾಲೈದು ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಲ್ಲುವ ಭಕ್ತಾದಿಗಳಿಗೆ ಅನುಕೂಲವಾಗುವಂತೆ ಕುಡಿಯುವ ನೀರು, ನೆರಳು, ಶೌಚಾಲಯ ವ್ಯವಸ್ಥೆ ಮತ್ತಿತರ ಮೂಲಸೌಕರ್ಯಗಳನ್ನು ಒದಗಿಸಬೇಕಾಗುತ್ತದೆ. ಇವೆಲ್ಲವುಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
ದೇವಸ್ಥಾನವು ಪ್ರತಿವರ್ಷ ಅಂದಾಜು ರೂ. 20 ಕೋಟಿ ಆದಾಯ ಹೊಂದಿದೆ. ಈ ಆದಾಯದಲ್ಲಿ ದೇವಸ್ಥಾನ ನಿರ್ವಹಣೆ ಬಳಿಕ ಉಳಿಯುವ ಹಣವನ್ನು ಮಾಸ್ಟರ್ ಪ್ಲಾನ್ ಅನುಷ್ಠಾನಕ್ಕೆ ಬಳಸಬಹುದಾಗಿದೆ. ಇದಲ್ಲದೇ ಸರಕಾರದಿಂದಲೂ ಹೆಚ್ಚಿನ ಅನುದಾನ ಬಿಡುಗಡೆ ಮಾಡಬಹುದು ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಇದಲ್ಲದೇ ಪ್ರವಾಸೋದ್ಯಮ ಇಲಾಖೆಯ ವತಿಯಿಂದಲೂ ಪ್ರತ್ಯೇಕ ಯೋಜನೆಯನ್ನು ಕೂಡ ರೂಪಿಸುವ ಮೂಲಕ ಒಟ್ಟಾರೆ ಸವದತ್ತಿ ಯಲ್ಲಮ್ಮ ಕ್ಷೇತ್ರದ ಅಭಿವೃದ್ಧಿಗೆ ಕಾಲಮಿತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ ಅವರು, ಮುಜರಾಯಿ ಹಾಗೂ ಪ್ರವಾಸೋದ್ಯಮ ಇಲಾಖೆಗಳ ವತಿಯಿಂದ ಅಭಿವೃದ್ಧಿ ಕಾಮಗಾರಿಗಳಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದರು.
ಮುಜರಾಯಿ ಇಲಾಖೆಗೆ ಸಂಬಂಧಿಸಿದಂತೆ ಲಭ್ಯವಿರುವ 87 ಎಕರೆ ಪ್ರದೇಶದಲ್ಲಿ ಮುಂದಿನ ಹತ್ತು ವರ್ಷಗಳ ಅವಧಿಯಲ್ಲಿ ಹಂತ ಹಂತವಾಗಿ ಅನುಷ್ಠಾನಗೊಳಿಸಬಹುದಾದ ಸಮಗ್ರ ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.
ಶಾಸಕರಾದ ವಿಶ್ವಾಸ್ ವೈದ್ಯ, ಮಾಜಿ ಶಾಸಕ ಆರ್ ವಿ ಪಾಟೀಲ್, ಧಾರ್ಮಿಕ ದತ್ತಿ ಆಯುಕ್ತ ಬಸವರಾಜೇಂದ್ರ, ರೇಣುಕಾ ಯಲ್ಲಮ್ಮ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್, ಮೊದಲಾದ ಪ್ರಮುರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.






































































