ಬೀದರ್: ರಾಜ್ಯದಲ್ಲಿ ಆಪರೇಷನ್ ಕಮಲವು ಬಿಜೆಪಿಗೆ ಅಧಿಕಾರ ತಂದುಕೊಟ್ಟಿದೆಯಾದರೂ ಜನರ ಒಲವು ಮಾತ್ರ ಈ ಕಮಲ ಕಾರ್ಯಾಚರಣೆಯತ್ತ ಇಲ್ಲ ಎಂಬುದು ಮತ್ತೊಮ್ಮೆ ಗೊತ್ತಾಗಿದೆ. ಕೆಲ ತಿಂಗಳ ಹಿಂದಿನ ಉಪಚುನಾವಣೆಯಲ್ಲಿ ಮೈಸೂರಿನಲ್ಲಿ ಹೆಚ್. ವಿಶ್ವನಾಥ್ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ಎಂ.ಟಿ.ಬಿ.ನಾಗರಾಜ್ ಅವರು ಹೀನಾಯವಾಗಿ ಸೋಲುಂಡಿದ್ದರು. ಇದೀಗ ಮತ್ತೊಬ್ಬ ನಾಯಕ ಪ್ರತಾಪ್ ಗೌಡ ಪಾಟೀಲ್ ಅವರನ್ನೂ ಸೋಲಿಸುವ ಮೂಲಕ ಮಸ್ಕಿ ಕ್ಷೇತ್ರದ ಮತದಾರರು ಸಙದೇಶವೊಂದನ್ನು ಕೊಟ್ಟಿದ್ದಾರೆ.
ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಕೆಡವಿದ ಆಪರೇಷನ್ ಕಮಲ ಕಾರ್ಯಾಚರಣೆಗೆ ಪ್ರತಾಪ್ ಗೌಡ ಪಾಟೀಲ್ ಬಲಿಯಾಗಿದ್ದರು. ಅವರು ಪ್ರತಿನಿಧಿಸುತ್ತಿದ್ದ ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದೆ.
ಈ ಉಪಚುನಾವಣೆಯಲ್ಲಿ ಬಿಜೆಪಿ ಹುರಿಯಾಳಾಗಿ ಸ್ಪರ್ದಿಸಿದ್ದ ಪ್ರತಾಪಗೌಡ ಪಾಟೀಲ್ ಅವರು ಕಾಂಗ್ರೆಸ್ ಅಭ್ಯರ್ಥಿ ಬಸವನಗೌಡ ತುರುವಿಹಾಳ್ ವಿರುದ್ದ ಸೋಲೊಪ್ಪಿಕೊಂಡಿದ್ದಾರೆ.
ಮತೆಣಿಕೆ ಆರಂಭವಾದಾಗಿನಿಂದಲೂ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್ ಅಭ್ಯರ್ಥಿ ಬಸವನಗೌಡ ಅವರು ಬಿಜೆಪಿಯ ಪ್ರತಾಪ್‌ಗೌಡ ಪಾಟೀಲ್ ವಿರುದ್ದ ಸುಮಾರು 26 ಸಾವಿರ ಮತಗಳ ಅಂತರದಿಂದ ಜಯಗಳಿಸಿದ್ದಾರೆ.