ಮಂಗಳೂರು; ನೆಲ್ಲಿಗುಡ್ಡೆ ಪರಿಸರ ಅಧ್ಯಯನ ಟ್ರಸ್ಟ್ ಹಾಗೂ ಯೆನೆಪೋಯ ಪದವಿ ಕಾಲೇಜು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸೋಮವಾರ ವಿಶ್ವ ಪರಿಸರ ದಿನಚರಣೆ ವಿಶಿಷ್ಟವಾಗಿ ನೆರವೇರಿತು.
ಲಾಲ್ ಭಾಗ್‌ನ ವನಿತಾ ಪಾರ್ಕ್‌ನಲ್ಲಿ ಭಾಗವಹಿಸಿದ್ದ ಯೆನೆಪೋಯ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಅರುಣ್ ಭಾಗವತ್ ಮಾತನಾಡುತ್ತಾ,ಜಾಗತಿಕ ಹವಾಮಾನ ವೈಪರೀತ್ಯ ದಿಂದ ಆಗುತ್ತಿರುವ ಸಮಸ್ಯೆಗಳನ್ನು ಗಮನಿಸಿದರೆ ಪರಿಸರ ಸಂರಕ್ಷಣೆಯ ಮಹತ್ವವನ್ನು ಅರಿತುಕೊಳ್ಳ ಬಹುದು ಎಂದರು.
ನಮಗೆಲ್ಲಾ ಜೀವನಾಧಾರ ವಾದ ನೀರಿನ ಕೊರತೆ ಉಂಟಾದಾಗ ನಾವು ಯಾವ ಸಮಸ್ಯೆ ಎದುರಿಸಬೇಕಾಗುತ್ತದೆ ಎನ್ನುವ ಅನುಭವ ಈಗ ನಮಗಾಗುತ್ತಿದೆ. ಇದರ ಹಿಂದೆ ಪರಿಸರ ಸಂರಕ್ಷಣೆ, ಗಿಡ ಮರಗಳ ಸಂರಕ್ಷಣೆಯ ಅಗತ್ಯ ಎಷ್ಟಿದೆ ಎನ್ನುವುದರ ಮಹತ್ವ ತಿಳಿದುಕೊಳ್ಳಲು.ಪರಿಸರ ಸಂರಕ್ಷಣೆ ಗೆ ಸರಕಾರ, ಅದರೊಂದಿಗೆ ಪಾಲುದಾರರಾದ ನಮ್ಮೆಲ್ಲರ ಜವಾಬ್ದಾರಿ ಇದೆ ಎಂದು ಅರುಣ್ ಭಾಗವತ್ ತಿಳಿಸಿದರು.
ಈ ಸಂದರ್ಭದಲ್ಲಿ ವಿಶ್ರಾಂತ ಅಪರ ಜಿಲ್ಲಾಧಿಕಾರಿ ಹಾಗೂ ಇಂಡಿಯನ್ ರೆಡ್ ಕ್ರಾಸ್ ದ.ಕ ಜಿಲ್ಲಾ ಘಟಕದ ಸಲಹೆಗಾರರಾದ ಪ್ರಭಾಕರ ಶರ್ಮ ಮಾತನಾಡಿ,ಇತ್ತೀಚಿನ ಪರಿಸರ ಮಾಲಿನ್ಯ ಮತ್ತು ಅದರಿಂದ ಉಂಟಾಗುವ ಸಮಸ್ಯೆಗಳನ್ನು ಗಮನಿಸಿದಾಗ ಭವಿಷ್ಯದಲ್ಲಿ ಶುದ್ಧ ಗಾಳಿ,ಶುದ್ಧ ನೀರು ನಮ್ಮ ಮುಂದಿನ ಪೀಳಿಗೆಗೆ ಹೇಗೆ ದೊರಕಬಹುದು ಎಂಬ ಆತಂಕ ನಮ್ಮನ್ನು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಸಾಮೂಹಿಕ ಪ್ರಯತ್ನ ಅಗತ್ಯವಿದೆ ಎಂದರು.
ಪಾಲಿಕೆ ಸದಸ್ಯೆ ಸಂಧ್ಯಾ ಮೋಹನ ಆಚಾರ್ ಮಾತನಾಡಿ ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರ ಪಾಲು ಇರಬೇಕು ಎಂದರು.
ನೆಲ್ಲಿಗುಡ್ಡೆ ಪರಿಸರ ಅಧ್ಯಯನ ಕೇಂದ್ರದ ಅಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮಾತನಾಡಿ ಪ್ಲಾಸ್ಟಿಕ್ ತ್ಯಾಜ್ಯದ ಬಗ್ಗೆ ಜಾಗೃತಿ ಯೊಂದಿಗೆ ಪರಿಸರದಲ್ಲಿ ಮನುಷ್ಯರಂತೆ ಇತರ ಜೀವಿಗಳಿಗೂ ಆಹಾರ ದೊರೆಯುವ ಹಣ್ಣಿನ ಗಿಡಗಳನ್ನು ಹೆಚ್ಚು ಬೆಳೆಸಬೇಕಾಗಿದೆ ಎಂದರು.
ನಿವೃತ್ತ ಲೋಕೋಪ ಯೋಗಿ ಇಲಾಖೆಯ ಹಿರಿಯ ಅಭಿಯಂತರ ಬಾಲಕೃಷ್ಣ ಮಾತನಾಡಿ, ನಾವು ಕುಡಿಯುವ ನೀರು ಪರಿಸರ ಮಾಲಿನ್ಯದಿಂದ ಎಷ್ಟು ಕಲುಷಿತಗೊಂಡಿದೆ ಎಂದು ವಿವರಿಸಿದರು. ರೆಡ್‌ಕ್ರಾಸ್ ಘಟಕದ ಹಿರಿಯ ಸದಸ್ಯ ರವೀಂದ್ರನಾಥ ಉಚ್ಚಿಲ್, ಪತ್ರಕರ್ತರಾದ ಪುಷ್ಪರಾಜ್ ಬಿ.ಎನ್ ಉಪಸ್ಥಿತರಿದ್ದರು. ಪತ್ರಕರ್ತ ಭಾಸ್ಕರ್ ರೈ ಕಟ್ಟ, ಯೆನೆಪೋಯ ಪದವಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಅತಿಥಿಗಳು ವನಿತಾ ಪಾರ್ಕ್ ನಲ್ಲಿ ಹಣ್ಣಿನ ಗಿಡಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ಅರ್ಥ ತುಂಬಿದರು.