ಮಂಗಳೂರು: ಇರುವೈಲು ಮತ್ತು ಕಿಲೆಂಜಾರು ಗ್ರಾಮದ ಗಡಿ ಪ್ರದೇಶ ಕೊಲ್ಲಾಯ್ ಕೊಡಿ ಎಂಬಲ್ಲಿ ಹಂದಿಗೆ ಇಟ್ಟಿದ್ದ ಉರುಳಿಗೆ ಸಿಲುಕಿದ ಚಿರತೆಯೊಂದನ್ನು ಅರಣ್ಯ ಇಲಾಖೆ ಮತ್ತು ಪೊಲೀಸರು ಸತತ ಎರಡೂವರೆ ಗಂಟೆಗಳ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ.
ಕೊಲ್ಲಾಯ್ ಕೊಡಿ ಎಂಬಲ್ಲಿ ಪಲ್ಗುಣಿ ನದಿಯ ಸಮೀಪ ಚಿರತೆಯೊಂದು ಉರುಳಿಗೆ ಸಿಲುಕಿ ಒದ್ದಾಡುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಮೂಡುಬಿದಿರೆ ಅರಣ್ಯ ಇಲಾಖೆ ಮತ್ತು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ವೈದ್ಯಕೀಯ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಮತ್ತು ಪೊಲೀಸರು ಪೊದೆಯೊಳಗೆ ಸಿಲುಕಿ ಒದ್ದಾಡುತ್ತಿದ್ದ ಚಿರತೆಗೆ ಅರಿವಳಿಕೆ ಚುಚ್ಚುಮದ್ದು ನೀಡಲು ಮಾಡಿದ ಮೊದಲ ಪ್ರಯತ್ನ ವಿಫಲವಾಯಿತು.
ಗಿಡಗಂಟಿಗಳ ನಡುವೆ ಅಲ್ಯೂಮಿನಿಯಂ ತಂತಿಯಿಂದ ಮಾಡಲ್ಪಟ್ಟಿರುವ ಉರುಳಿನಲ್ಲಿ ಸಿಲುಕಿದ್ದ ಚಿರತೆಯನ್ನು ಯಾವುದೇ ಅಪಾಯವಿಲ್ಲದಂತೆ ಬಿಡಿಸಿ ಬೋನಿಗೆ ಸ್ಥಳಾಂತರಿಸಿ ಮೂಡುಬಿದಿರೆ ಸಾಗಿಸಲಾಯಿತು.
ಮೂಡುಬಿದಿರೆ ಅರಣ್ಯ ಇಲಾಖೆಯ ಅಧಿಕಾರಿಗಳು, ಮೂಡುಬಿದಿರೆ ಪೊಲೀಸ್ ಠಾಣೆಯ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿದ್ದರು.