ನವದೆಹಲಿ: PM CARES ನಿಧಿಯ ಹಣದ ಬಳಕೆ ಹಾಗೂ ನಿರ್ವಹಣೆ ಕುರಿತು ಕರ್ನಾಟಕ ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ತುರ್ತು ಪರಿಹಾರಕ್ಕಾಗಿ ಸಂಗ್ರಹಿಸಿದ ಹಣವನ್ನು ಸಮರ್ಪಕವಾಗಿ ಬಳಸಲಾಗುತ್ತಿದೆಯೇ ಎಂಬ ಬಗ್ಗೆ ಅವರು ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್ ‘ನಲ್ಲಿ ಈ ಕುರಿತಂತೆ ಪ್ರಶ್ನಿಸಿರುವ ಪ್ರಿಯಾಂಕ್ ಖರ್ಗೆ, 2024-25ರ PM CARES ನಿಧಿಯ ಆಡಿಟ್ ವರದಿಯನ್ನು ಉಲ್ಲೇಖಿಸಿ, ನಿಧಿಯಲ್ಲಿ ಸುಮಾರು ₹8,452 ಕೋಟಿ ಲಭ್ಯವಿದ್ದರೂ, ಕೇವಲ 0.01% ಹಣವನ್ನು ಮಾತ್ರ ಬಳಸಲಾಗಿದೆ ಎಂದು ಆರೋಪಿಸಿದ್ದಾರೆ.

ಅಲ್ಲದೆ, ಅನುಷ್ಠಾನ ಸಂಸ್ಥೆಗಳಿಂದ ₹324 ಕೋಟಿ ಹಣ ವಾಪಸ್ ಬಂದಿರುವ ದಾಖಲೆ ಕುರಿತು ಅವರು ಸ್ಪಷ್ಟನೆ ಕೋರಿದ್ದಾರೆ. ಯಾವ ಸಂಸ್ಥೆಗಳು ಹಣವನ್ನು ವಾಪಸ್ ನೀಡಿವೆ ಮತ್ತು ಅದರ ಕಾರಣವೇನು ಎಂಬುದನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಹಣಕಾಸು ಹೇಳಿಕೆಗಳೊಂದಿಗೆ ಅಗತ್ಯ ಟಿಪ್ಪಣಿಗಳು ಇಲ್ಲದಿರುವುದನ್ನೂ ಪ್ರಶ್ನಿಸಿರುವ ಖರ್ಗೆ, ನಿಧಿಯ ವಹಿವಾಟು ಮತ್ತು ಹಣ ಬಳಕೆಯಲ್ಲಿ ಹೆಚ್ಚಿನ ಪಾರದರ್ಶಕತೆ ಅಗತ್ಯ ಎಂದು ಹೇಳಿದ್ದಾರೆ.
PM CARES is one of the biggest institutional scams and betrayals of public trust by PM Modi.
Why is the Modi government collecting money from both domestic and foreign contributors in the name of emergency relief, when it has no intention of spending it when it matters?
The… pic.twitter.com/01LHZZyJJy
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) August 19, 2026
2020ರಲ್ಲಿ ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ತುರ್ತು ಪರಿಹಾರ ಕಾರ್ಯಗಳಿಗೆ PM CARES ನಿಧಿಯನ್ನು ಸ್ಥಾಪಿಸಲಾಗಿತ್ತು. ಬಳಿಕ ದೇಶದ ವಿವಿಧ ಭಾಗಗಳಲ್ಲಿ ಪ್ರವಾಹ, ಚಂಡಮಾರುತ ಹಾಗೂ ಬರದಂತಹ ಹಲವು ಬಿಕ್ಕಟ್ಟುಗಳು ಎದುರಾಗಿವೆ ಎಂದು ಖರ್ಗೆ ಹೇಳಿದ್ದಾರೆ.
ತುರ್ತು ಸಂದರ್ಭಗಳಿಗಾಗಿ ಸಂಗ್ರಹಿಸಿದ ಹಣವನ್ನು ಅಗತ್ಯವಿರುವ ಜನರಿಗೆ ನೆರವಾಗಲು ಬಳಸಬೇಕು ಎಂದು ಒತ್ತಾಯಿಸಿರುವ ಅವರ ಹೇಳಿಕೆ, PM CARES ನಿಧಿಯ ಪಾರದರ್ಶಕತೆ ಮತ್ತು ಹಣದ ಬಳಕೆ ಕುರಿತು ರಾಜಕೀಯ ಚರ್ಚೆಗೆ ಮತ್ತಷ್ಟು ವೇಗ ನೀಡಿದೆ.







































































