ಚೆನ್ನೈ: ತಮಿಳುನಾಡು ಸರ್ಕಾರ ಮಹಿಳಾ ಸರ್ಕಾರಿ ನೌಕರರಿಗೆ ಮಹತ್ವದ ಸೌಲಭ್ಯ ಘೋಷಿಸಿದ್ದು, ಇನ್ನು ಮುಂದೆ ಮೂರನೇ ಮಗುವಿನ ಹೆರಿಗೆಗೂ 365 ದಿನಗಳ ಮಾತೃತ್ವ ರಜೆ ನೀಡಲು ನಿರ್ಧರಿಸಿದೆ.
ಈವರೆಗೆ ಮೊದಲ ಎರಡು ಮಕ್ಕಳಿಗೆ ಒಂದು ವರ್ಷದವರೆಗೆ ರಜೆ ಲಭ್ಯವಿದ್ದರೆ, ಮೂರನೇ ಅಥವಾ ಅದಕ್ಕಿಂತ ಹೆಚ್ಚಿನ ಮಗುವಿಗೆ ಕೇವಲ 12 ವಾರಗಳ ರಜೆ ನೀಡಲಾಗುತ್ತಿತ್ತು. ಇದೀಗ ನಿಯಮ ಬದಲಿಸಿ ಮೂರನೇ ಮಗುವಿಗೂ ಒಂದು ವರ್ಷದ ರಜೆ ನೀಡಲಾಗುತ್ತಿದೆ.

ಮಹಿಳಾ ಸರ್ಕಾರಿ ನೌಕರರ ಕಲ್ಯಾಣ ಮತ್ತು ಸಬಲೀಕರಣದ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ. ಹೆರಿಗೆ ಬಳಿಕ ಮಗುವಿನ ಆರೈಕೆಗೆ ಹೆಚ್ಚಿನ ಸಮಯ ಸಿಗುವುದರಿಂದ ಮಹಿಳೆಯರಿಗೆ ಕುಟುಂಬ ಮತ್ತು ಉದ್ಯೋಗದ ಜವಾಬ್ದಾರಿಗಳನ್ನು ಸಮತೋಲನಗೊಳಿಸಲು ನೆರವಾಗಲಿದೆ.
ಇದೇ ವೇಳೆ, ತಮಿಳುನಾಡು ಸರ್ಕಾರ ಆರೋಗ್ಯ ಕ್ಷೇತ್ರದಲ್ಲೂ ಮಹತ್ವದ ಘೋಷಣೆ ಮಾಡಿದೆ. ಮುಖ್ಯಮಂತ್ರಿಗಳ ಸಮಗ್ರ ಆರೋಗ್ಯ ವಿಮಾ ಯೋಜನೆಯಡಿ ವಾರ್ಷಿಕ ವಿಮಾ ಮೊತ್ತವನ್ನು ₹5 ಲಕ್ಷದಿಂದ ₹25 ಲಕ್ಷಕ್ಕೆ ಹೆಚ್ಚಿಸುವುದಾಗಿ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ತಿಳಿಸಿದ್ದಾರೆ.
ಈ ಹೆಚ್ಚಳದಿಂದ ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುವ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಹೆಚ್ಚಿನ ಆರ್ಥಿಕ ನೆರವು ದೊರೆಯಲಿದೆ ಎಂದು ಸರ್ಕಾರ ಹೇಳಿದೆ.
ಮಹಿಳಾ ಸರ್ಕಾರಿ ನೌಕರರಿಗೆ ಮೂರನೇ ಮಗುವಿಗೂ ಒಂದು ವರ್ಷದ ಮಾತೃತ್ವ ರಜೆ ನೀಡಿರುವ ಕ್ರಮವನ್ನು ಪ್ರಮುಖ ಕಲ್ಯಾಣ ಕ್ರಮವೆಂದು ಪರಿಗಣಿಸಲಾಗಿದೆ.







































































