ಬೆಂಗಳೂರು: ಮಂಡ್ಯ ಜಿಲ್ಲೆಯಲ್ಲಿನ ಅಕ್ರಮ ಗಣಿಗಾರಿಕೆ ವಿರುದ್ದ ಸಮರ ಸಾರಿರುವ ಸಂಸದೆ ಸುಮಲತಾ ಅಂಬರೀಶ್ ಇದೀಗ ಗಣಿ ಸಚಿವರ ಕಚೇರಿ ಮೆಟ್ಟಿಲೇರಿದ್ದಾರೆ.
ಅಕ್ರಮ ಗಣಿಗಾರಿಕೆಯಿಂದ ಕೆಆರ್‌ಎಸ್‌ಗೆ ಸಂಕಷ್ಟ ಎದುರಾಗಿದೆ ಎಂದು ಸುಮಲತಾ ಆತಂಕ ವ್ಯಕ್ತಪಡಿಸಿದ ಕಾರಣಕ್ಕಾಗಿ ಎದುರಾಳಿ ಜೆಡಿಎಸ್ ನಾಯಕರು ಸಂಸದೆ ವಿರುದ್ದ ತಿರುಗಿ ಬಿದ್ದಿದ್ದರು. ಅಷ್ಟೇ ಅಲ್ಲ, ಗಣಿ ಅಕ್ರಮದ ಅಡ್ಡೆಯಾಗಿರುವ ಬೇಬಿ ಬೆಟ್ಟಕ್ಕೆ ಪರಿಶೀಲನೆಗೆಂದು ಅಧಿಕಾರಿಗಳೊಂದಿಗೆ ಸಂಸದೆ ಸುಮಲತಾ ತೆರಳಿದ್ದ ಸಂದರ್ಭದಲ್ಲಿ ಕಿಡಿಗೇಡಿಗಳು ಮಾರ್ಗಕ್ಕೆ ಮಣ್ಣು ಸುರಿದು ಅಡ್ಡಿಪಡಿಸಿದ್ದರು.
ಇದರಿಂದ ಕುಪಿತಗೊಂಡಿರುವ ಸುಮಲತಾ, ಸಿಎಂಗೂ ದೂರು ನೀಡುವುದಾಗಿ ಹೇಳಿದ್ದರು. ಈ ನಡುವೆ ಇಂದು ಬೆಂಗಳೂರಿನಲ್ಲಿ ಗಣಿ ಸಚಿವ ಮುರುಗೇಶ ನಿರಾಣಿ ಅವರನ್ನು ಭೇಟಿಯಾಗಿ ದೂರು ನೀಡಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಸುಮಲತಾ ಅವರು ಇಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ದಾವಣಗೆರೆ ಲೋಕಸಭಾ ಸದಸ್ಯರ ಜಿ.ಎಂ.ಸಿದ್ದೇಶ್ವರ್ ಕೂಡಾ ಉಪಸ್ಥಿತರಿದ್ದರು.