ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಸುಳಿವು ಕೇಸರಿ ಪಾಳಯದಲ್ಲಿ ಸಂಚಲನ ಮೂಡಿಸಿದೆ. ಯಡಿಯೂರಪ್ಪ ಅವರ ಪದಚ್ಯುತಿ ವಿರುದ್ದ ಲಿಂಗಾಯತ ಸಮುದಾಯದ ಮುಖಂಡರು ಹಾಗೂ ಸ್ವಾಮೀಜಿಗಳು ಸಿಡಿದೆದ್ದಿದ್ದು ಇದೀಗ ಈ ಪರಿಸ್ಥಿತಿಯನ್ನು ತಿಳಿಗೊಳಿಸುವುದು ಬಿಜೆಪಿ ಹಾಗೂ ಸಂಘಪರಿವಾರಕ್ಕೆ ಅನಿವಾರ್ಯವಾಗಿದೆ. ಹಾಗಾಗಿ ಪರ್ಯಾಯ ನಾಯಕನಾಗಿ ಲಿಂಗಾಯತ ಶಾಸಕನನ್ನೇ ಆಯ್ಕೆ ಮಾಡುವ ಬಗ್ಗೆ ಹೈಕಮಾಂಡ್ ಚಿಂತನೆ ನಡೆಸಿದೆ.
‘ಲಿಂಗಾಯತ’ ಪ್ರತಿಧ್ವನಿ:
ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬದಲಾಯಿಸಬಾರದೆಂದು ಒತ್ತಾಯಿಸುತ್ತಿರುವ ಲಿಂಗಾಯತ ಸ್ವಾಮಿಗಳು ಇಂದೂ ಕೂಡಾ ಕಸರತ್ತನ್ನು ಮುಂದುವರಿಸಿದ್ದಾರೆ. ಇಂದೂ ಕೂಡಾ ಹಲವಾರು ಶ್ರೀಗಳು ಸಿಎಂ ಬಿಎಸ್‌ವೈ ಭೇಟಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿಗಳ ಸಮೂಹ, ಯಡಿಯೂರಪ್ಪ ಅವರನ್ನು ಪದಚ್ಯುತಿ ಮಾಡಿದರೆ ನಾವು ಸಹಿಸಲ್ಲ ಎಂದು ಬಿಜೆಪಿ ಹೈಕಮಾಂಡ್‌ಗೆ ಎಚ್ಚರಿಕೆಯ ಸಂದೇಶ ನೀಡಿದರು.
ಸ್ವಾಮೀಜಿಗಳಿಂದಲೇ ಪರ್ಯಾಯ ನಾಯಕನ ಹೆಸರು..?
ಒಂದು ವೇಳೆ ಯಡಿಯೂರಪ್ಪ ಅವರನ್ನು ಬದಲಾಯಿಸಿದರೆ ಲಿಂಗಾಯತರನ್ನೇ ಸಿಎಂ ಮಾಡಿಸಬೇಕೆಂಬ ಕಾರ್ಯತಂತ್ರವೂ ಆ ಸಮುದಾಯಗಳ ನಾಯಕರಿಂದ ನಡೆಯುತ್ತಿದೆ. ಇದಕ್ಕೆ ಪುಷ್ಟಿ ನೀಡಿದೆ ಕೊಳದ ಮಠದ ಶ್ರೀ ಶಾಂತವೀರ ಮಹಾಸ್ವಾಮಿಗಳ ಹೇಳಿಕೆ.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಶಾಂತವೀರ ಮಹಾಸ್ವಾಮಿ, ಸಿಎಂ ಬದಲಾಯಿಸಿದ್ದೇ ಆದಲ್ಲಿ ಲಿಂಗಾಯತ ಶಾಸಕ ಅರವಿಂದ ಬೆಲ್ಲದ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಿ ಎಂದು ಬಿಜೆಪಿ ಹೈಕಮಾಂಡ್‌ಗೆ ಸಲಹೆ ಮಾಡಿದ್ದಾರೆ.
ಹೈಕಮಾಂಡ್ ನಿರ್ಧಾರಕ್ಕೆ ಬದ್ದ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಈ ವಿಚಾರದಲ್ಲಿ ನಾವು ಯಾರ ಪರವೂ ಇಲ್ಲ, ಯಾರ ವಿರುದ್ದವೂ ಇಲ್ಲ ಎಂದ ಸ್ವಾಮೀಜಿ, ನಾಯಕತ್ವ ಬದಲಾವಣೆಯಾಗುವುದಾದರೆ ಲಿಂಗಾಯತರಿಗೆ ಮಣೆ ಹಾಕಬೇಕು. ಅರವಿಂದ್ ಬೆಲ್ಲದ್ ಅಥವಾ ಬೇರೆ ಸಮರ್ಥರನ್ನು ಅವರನ್ನು ಸಿಎಂ ಮಾಡಲಿ ಎಂದರು. ವೀರಶೈವ ಧರ್ಮ ಉಳಿಯುವುದಕ್ಕಾಗಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದವರು ಹೇಳಿದರು.