ಶಿರಸಿ: ರಾಜಕೀಯ ವಿದ್ಯಮಾನಗಳ ಬಗ್ಗೆ ನಿಖರ ಭವಿಷ್ಯ ನುಡಿಯುವ ಕೋಡಿಮಠದ ಶ್ರೀಗಳು ಇದೀಗ ರಾಜ್ಯ ಬಿಜೆಪಿಯಲ್ಲಿನ ಬೆಳವಣಿಗೆ ಕುರಿತಂತೆ ನೀಡಿರುವ ಭವಿಷ್ಯ ಅಚ್ಚರಿ ಹಾಗೂ ಕುತೂಹಲಕ್ಕೆ ಕಾರಣವಾಗಿದೆ.
ಸದ್ಯ ಅಷ್ಟೇನೂ ಭಾರೀ ಬದಲಾವಣೆಗಳಾಗದು. ಅಷ್ಟೇ ಅಲ್ಲ, ಎಲ್ಲದಕ್ಕೂ ಸದ್ಯವೇ ತೆರೆ ಬೀಳಲಿದೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ತಮ್ಮದೇ ಶೈಲಿಯಲ್ಲಿ ಭವಿಷ್ಯದ ಸಂಗತಿಗಳತ್ತ ಬೊಟ್ಟುಮಾಡಿದ್ದಾರೆ.
ಉತ್ತರಕನ್ನಡ ಜಿಲ್ಲೆ ಶಿರಸಿ ಸಮೀಪದ ನೇರಲಕಟ್ಟೆಯ ಭೂದೇವಿ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವೇಳೆ ಮಾಧ್ಯಮದವರ ಜತೆ ಮಾತನಾಡಿದ ಶ್ರೀಗಳು, ಪ್ರಸಕ್ತ ರಾಜಕೀಯ ವಿದ್ಯಮಾನವನ್ನು ಬೇಟೆಗಾರ ಮತ್ತು ಸನ್ಯಾಸಿಯ ಕಥೆಗೆ ಹೋಲಿಕೆ ಮಾಡಿದರು. ‘ಬೇಟೆಗಾರನೊಬ್ಬನಿಂದ ತಪ್ಪಿಸಿಕೊಂಡ ಜಿಂಕೆ ಸನ್ಯಾಸಿಯೊಬ್ಬನ ಎದುರು ಹಾದು ಓಡಿಹೋಗಿತ್ತು. ಜಿಂಕೆಯ ಬಗ್ಗೆ ಸನ್ಯಾಸಿಯಲ್ಲಿ ಬೇಟೆಗಾರ ಕೇಳಿದಾಗ ಸನ್ಯಾಸಿ ದ್ವಂದ್ವದಲ್ಲಿ ಸಿಲುಕಿದ್ದರು. ಜಿಂಕೆ ಓಡಿಹೋದ ದಿಕ್ಕು ಹೇಳಿದರೆ ಅದರ ಸಾವಿಗೆ ಕಾರಣವಾದಂತಾಗುತ್ತದೆ. ಹೇಳದಿದ್ದರೆ ಸುಳ್ಳು ನುಡಿದಂತಾಗುತ್ತದೆ ಎಂಬ ಸಂಕಟ ಪರಿಸ್ಥಿತಿ ಸನ್ಯಾಸಿಯದ್ದಾಗಿತ್ತು. ಇದೇ ವಿಚಾರ ರಾಜಕೀಯದ ಬಗ್ಗೆ ಹೇಳಲು ತೊಡಕಾಗುತ್ತದೆ. ಆದರೆ ಸದ್ಯವೇ ಈ ಸ್ಥಿತಿ ಸುಖಾಂತ್ಯ ಕಾಣಲಿದೆ ಎಂದು ಭವಿಷ್ಯ ನುಡಿದರು.
ರಾಷ್ಟ್ರಮಟ್ಟದಲ್ಲೂ ಬದಲಾವಣೆ..?
‘ನವೆಂಬರ್‌ನಿಂದ ಸಂಕ್ರಾಂತಿ ನಡುವೆ ದೇಶ ಮಟ್ಟದಲ್ಲಿ ದೊಡ್ಡ ರಾಜಕೀಯ ಅವಘಡಕ್ಕೆ ಸಾಕ್ಷಿಯಾಗಲಿದೆ. ಅದು ಜಾಗತಿಕವಾಗಿ ತಲ್ಲಣ ಸೃಷ್ಟಿಸುತ್ತದೆ’ ಎಂದು ಅವರು ಹೇಳಿದ ಭವಿಷ್ಯ ನುಡಿ ಮತ್ತೊಂದು ರೀತಿಯ ಸಂಚಲನಕ್ಕೆ ಕಾರಣವಾಗಿದೆ.
ಕೋವಿಡಾಘಾತ ಸನ್ನಿಹಿತ..
‘ಆಗಸ್ಟ್ ಮೂರನೇ ವಾರದಿಂದ ಕೋವಿಡ್ ಹಾವಳಿ ಹೆಚ್ಚಲಿದೆ. ರೋಗದಿಂದ ಜನರು ಸಾಯುವುದಿಲ್ಲ ಬದಲಾಗಿ. ರೋಗದ ಭಯದಿಂದಲೇ ಸಾಯುವವರ ಸಂಖ್ಯೆ ಹೆಚ್ಚುವ ಆತಂಕದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದ ಅವರು. ಜನ ಧೈರ್ಯ ಕಳೆದುಕೊಳ್ಳಬಾರದು’ ಎಂದರು.
ಪ್ರಕೃತಿ ಮುನಿಸು..
ಪ್ರಾಕೃತಿಕ ವಿಕೋಪ ಕುರಿತಂತೆಯೂ ಕೋಡಿಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ‘ಮಳೆ, ಗಾಳಿ ಅಧಿಕವಾಗಲಿದೆ. ಕೆರೆಕಟ್ಟೆಗಳು ಭರ್ತಿಯಾಗಿ, ಜಲಪ್ರಳಯ ಸಂಭವಿಸಲಿದೆ. ಪಂಚಭೂತಗಳಿಂದಲೂ ಈ ವರ್ಷ ಅನಾಹುತ ಸಂಭವಿಸಲಿದೆ’ ಎಂದವರು ಹೇಳಿದರು.