ಬೆಂಗಳೂರು: ಆರೋಪಿತ ಸ್ಟಿಂಗ್ ವಿಡಿಯೋ ಬಿಡುಗಡೆ ಹಿಂದೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರೇ ರೂವಾರಿಯಾಗಿದ್ದು, ಅವರ ಸಾಮಾಜಿಕ ಜಾಲತಾಣ ತಂಡ ಈ ಕಾರ್ಯಾಚರಣೆಯಲ್ಲಿ ನೇರವಾಗಿ ಭಾಗಿಯಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಗಂಭೀರ ಆರೋಪ ಮಾಡಿದ್ದಾರೆ.
ಕುಮಾರಸ್ವಾಮಿ ಅವರ ದೆಹಲಿಯ ಅಧಿಕೃತ ನಿವಾಸವನ್ನೇ ಈ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿತ್ತು. ಹಣದ ವಹಿವಾಟು ಕೂಡ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ. ಮಾಜಿ ಮುಖ್ಯಮಂತ್ರಿಯವರ ಗೌರವಕ್ಕೆ ಧಕ್ಕೆ ತರುವುದರ ಜತೆಗೆ, ಇದರ ಆರೋಪವನ್ನು ಹಾಲಿ ಮುಖ್ಯಮಂತ್ರಿಯವರ ಮೇಲೆ ಹೊರಿಸುವುದು ಈ ತಂತ್ರದ ಉದ್ದೇಶವಾಗಿತ್ತು ಎಂದು ಹೇಳಿದ್ದಾರೆ.

ಸಾರ್ವಜನಿಕ ಜೀವನದಲ್ಲಿ ಆರೋಪ-ಪ್ರತ್ಯಾರೋಪಗಳು ಸಹಜ. ಆದರೆ ರಾಜಕೀಯ ಕುತಂತ್ರ, ಚಾರಿತ್ರ್ಯವಧೆ ಮತ್ತು ದ್ವೇಷದ ರಾಜಕಾರಣವೇ ನಾಯಕರ ಏಕೈಕ ಕೆಲಸವಾಗಬಾರದು. ಜನರು ಅಧಿಕಾರ ನೀಡಿರುವುದು ಸಾರ್ವಜನಿಕ ಸೇವೆಗಾಗಿ ಹೊರತು ರಾಜಕೀಯ ಸೇಡಿಗಾಗಿ ಅಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂತಹ ಬೆಳವಣಿಗೆಗಳು ರಾಜಕೀಯ ವ್ಯವಸ್ಥೆಯ ಗೌರವಕ್ಕೆ ಧಕ್ಕೆ ತರುತ್ತವೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಬದಲು ಪರಸ್ಪರ ಆರೋಪ ಮಾಡುವುದರಲ್ಲಿ ಕಾಲ ಕಳೆಯುವುದು ಜನರಿಗೆ ಮಾಡುವ ಅನ್ಯಾಯ ಎಂದು ಕೃಷ್ಣ ಬೈರೇಗೌಡ ಟೀಕಿಸಿದ್ದಾರೆ.















































































