ಹೈದರಾಬಾದ್: ಮುಂದಿನ ಹತ್ತು ವರ್ಷಗಳಲ್ಲಿ ಭಾರತದ ಮೆಕ್ಕೆಜೋಳ ಉತ್ಪಾದನೆಯನ್ನು ಈಗಿನ 55 ಮಿಲಿಯನ್ ಟನ್ನಿಂದ 75 ಮಿಲಿಯನ್ ಟನ್ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆ ಕಾರ್ಯದರ್ಶಿ ಹಾಗೂ ಐಸಿಎಆರ್ ಮಹಾನಿರ್ದೇಶಕ ಎಂ.ಎಲ್. ಜಾಟ್ ತಿಳಿಸಿದ್ದಾರೆ.
ಹೈದರಾಬಾದ್ನಲ್ಲಿ ಸೋಮವಾರ ಆರಂಭವಾದ ಅಂತರರಾಷ್ಟ್ರೀಯ ಮೆಕ್ಕೆಜೋಳ ಸಮ್ಮೇಳನದಲ್ಲಿ ಮಾತನಾಡಿದ ಅವರು, ಉತ್ಪಾದಕತೆಯನ್ನು ಶೇ.50ರಷ್ಟು ಹೆಚ್ಚಿಸುವ ಅಗತ್ಯವಿದೆ ಎಂದರು. ಇದಕ್ಕಾಗಿ ಸುಧಾರಿತ ತಂತ್ರಜ್ಞಾನ, ಬೆಳೆ ನಿರ್ವಹಣೆ ಮತ್ತು ಸಂಪನ್ಮೂಲಗಳ ಪರಿಣಾಮಕಾರಿ ಬಳಕೆಗೆ ಒತ್ತು ನೀಡಬೇಕು ಎಂದು ಹೇಳಿದರು.

ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಗುಣಮಟ್ಟದ ಬೀಜಗಳ ಲಭ್ಯತೆ, ಸಾರ್ವಜನಿಕ ವಲಯದ ಹೈಬ್ರಿಡ್ ಬೀಜ ಉತ್ಪಾದನೆ ಮತ್ತು ಮೆಕ್ಕೆಜೋಳ ಕೃಷಿಯ ವಿಸ್ತರಣೆಗೆ ಆದ್ಯತೆ ನೀಡಬೇಕಿದೆ ಎಂದರು.
ಐಸಿಎಆರ್ ಉಪ ಮಹಾನಿರ್ದೇಶಕ ಡಿ.ಕೆ. ಯಾದವ್ ಮಾತನಾಡಿ, ಕಳೆದ ಐದು ವರ್ಷಗಳಲ್ಲಿ 329 ಮೆಕ್ಕೆಜೋಳದ ಹೈಬ್ರಿಡ್ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದರು.
ನವೆಂಬರ್ 4ರವರೆಗೆ ನಡೆಯುವ ಸಮ್ಮೇಳನದಲ್ಲಿ ವಿಜ್ಞಾನಿಗಳು, ನೀತಿ ನಿರೂಪಕರು ಮತ್ತು ಉದ್ಯಮ ಪ್ರತಿನಿಧಿಗಳು ಉತ್ಪಾದಕತೆ, ನಾವೀನ್ಯತೆ ಹಾಗೂ ಸುಸ್ಥಿರ ಕೃಷಿ ಕುರಿತು ಚರ್ಚಿಸಲಿದ್ದಾರೆ.















































































