ಬೆಂಗಳೂರು: ರಾಷ್ಟ್ರಧ್ವಜದ ಕೆಳಗೆ ನಾಡಧ್ವಜವೂ ಹಾರಾಡುವಂತಾಗಬೇಕು. ನಾಡಧ್ವಜಕ್ಕೆ ಅಧಿಕೃತ ಮಾನ್ಯತೆ ನೀಡುವಂತೆ ರಾಜ್ಯದ ಜನತೆ ಒಗ್ಗಟ್ಟಿನಿಂದ ಕೇಂದ್ರಕ್ಕೆ ಸಂದೇಶ ರವಾನಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದರು.
ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ನಡೆದ 2026ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಸಂವಿಧಾನದಲ್ಲಿ ನಾಡಧ್ವಜ ಹೊಂದಬಾರದು ಎಂದು ಎಲ್ಲಿಯೂ ಹೇಳಿಲ್ಲ ಎಂದರು.
“ಭಾರತದ ಬಲ ಕರ್ನಾಟಕ” ಎಂಬ ಪರಿಕಲ್ಪನೆಯೊಂದಿಗೆ ರಾಜ್ಯ ಬೆಳೆಯಬೇಕು. ದೇಶದ ಜನಸಂಖ್ಯೆಯಲ್ಲಿ ಕರ್ನಾಟಕದ ಪಾಲು ಶೇ.5.5ರಷ್ಟಿದ್ದರೆ, ಆರ್ಥಿಕತೆಯಲ್ಲಿ ರಾಜ್ಯದ ಕೊಡುಗೆ ಶೇ.9.19ರಷ್ಟಿದೆ. ಬೆಂಗಳೂರು ಭಾರತದ ಹೆಬ್ಬಾಗಿಲಾಗಿ ಬೆಳೆದಿದೆ ಎಂದು ಹೇಳಿದರು.

2011ರ ಜನಗಣತಿ ಪ್ರಕಾರ ಬೆಂಗಳೂರಿನಲ್ಲಿ 107 ಭಾಷೆಗಳನ್ನು ಮಾತನಾಡುವ ಜನರಿದ್ದಾರೆ. ಆದರೆ ಶೇ.44.5ರಷ್ಟು ಜನ ಮಾತ್ರ ಕನ್ನಡವನ್ನು ಮಾತೃಭಾಷೆಯಾಗಿ ಹೊಂದಿದ್ದಾರೆ. ಹಿಂದೆ ಶೇ.90ರಷ್ಟು ಜನ ಕನ್ನಡ ಮಾತನಾಡುತ್ತಿದ್ದರು ಎಂದು ತಿಳಿಸಿದ ಅವರು, ಕನ್ನಡದ ಬಳಕೆ ಹೆಚ್ಚಿಸಬೇಕೆಂದರು.
ಕನ್ನಡ, ಕರ್ನಾಟಕ ಮತ್ತು ಕನ್ನಡಿಗರಿಗೆ ಸರ್ಕಾರ ಮೊದಲ ಆದ್ಯತೆ ನೀಡುತ್ತಿದೆ. ರಾಜ್ಯದ ಖಾಸಗಿ ಸಂಸ್ಥೆಗಳು, ಐಟಿ-ಬಿಟಿ ಕಂಪನಿಗಳು ಹಾಗೂ ಕಾರ್ಖಾನೆಗಳಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
“ಅನ್ಯಭಾಷೆಗಳು ಅತಿಥಿಯಾಗಿರಲಿ, ಕನ್ನಡ ಅಧಿಪತಿಯಾಗಿರಲಿ. ಕನ್ನಡ ಪ್ರೀತಿಸುವುದು ಬೇರೆ ಭಾಷೆಗಳನ್ನು ದ್ವೇಷಿಸುವುದಲ್ಲ. ಎಲ್ಲ ಭಾಷೆಗಳಿಗೂ ಗೌರವ ನೀಡಬೇಕು. ಆದರೆ ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ” ಎಂದರು.
ಕನ್ನಡ ಎಐ, ವಿಜ್ಞಾನ, ಸ್ಟಾರ್ಟ್ಅಪ್ ಮತ್ತು ಡಿಜಿಟಲ್ ಯುಗದ ಭಾಷೆಯಾಗಿ ಬೆಳೆಯಬೇಕು. ಕನ್ನಡದ ಬಲದಿಂದ ಜಗತ್ತನ್ನು ಗೆಲ್ಲಬೇಕು ಎಂದು ಕರೆ ನೀಡಿದರು.













































































