ಬೆಂಗಳೂರು: ಕರ್ನಾಟಕ ಸಾರಿಗೆ ಹೊಂದಿರುವ ಎಂಬ ಹೆಮ್ಮೆಯ ಲೋಗೋ ‘KSRTC’ ಕರ್ನಾಟಕದ ಪಾಲಿಗೆ ಇನ್ನು ನೆನಪು ಮಾತ್ರ. ಈ ಹೆಸರಿನ ಲೋಗೋ ಬಳಸಿ ರಾಜ್ಯ ಸರ್ಕಾರ ಬಸ್ಸುಗಳನ್ನು ಓಡಿಸುವಂತಿಲ್ಲ. ಈ ವಿಚಾರದಲ್ಲಿನ ಸುಮಾರು 27 ವರ್ಷಗಳ ಕಾನೂನು ಸಮರದಲ್ಲಿ ಕರ್ನಾಟಕಕ್ಕೆ ಹಿನ್ಬಡೆಯಾಗಿದೆ.
ಏನಿದು ವಿವಾದ..?
ಕರ್ನಾಟಕ ಮಾತ್ರವಲ್ಲ ಕೇರಳ ಕೂಡಾ KSRTC ಹೆಸರಲ್ಲೇ ರಾಜ್ಯ ಸಾರಿಗೆ ಬಸ್ಸುಗಳನ್ನು ಹೊಂದಿದೆ. ಆದರೆ ಕರ್ನಾಟಕದಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮ ಆರಂಭವಾಗುವ ಮುನ್ನವೇ ಕೇರಳದಲ್ಲಿ KSRTC (Kerala State Road Transport Corporation) ಅಸ್ತಿತ್ವದಲ್ಲಿತ್ತು. ಹಾಗಾಗಿ ಕೇರಳ ಸರ್ಕಾರ ಬಹು ಕಾಲದ ಹಿಂದೆಯೇ ಕರ್ನಾಟಕದ ಬಗ್ಗೆ ತಕರಾರು ಎತ್ತಿತ್ತು.
ಕೇರಳ 1965ರಿಂದಲೇ KSRTC ಟ್ರೇಡ್ ಮಾರ್ಕ್ ಬಳಸುತ್ತಿದೆ. ಕರ್ನಾಟಕ ಸರ್ಕಾರ 1973ರಿಂದ KSRTC ಹೆಸರನ್ನು ಬಳಸುತ್ತಿದೆ. ಹೀಗಾಗಿ ಈ ಟ್ರೇಡ್ ಮಾರ್ಕ್ ತಮಗೆ ಸೀಮಿತವಾಗಿರಬೇಕೆಂದು ಕೇರಳ 27 ವರ್ಷಗಳಿಂದ ಕಾನೂನು ಹೋರಾಟ ನಡೆಸಿದೆ. ಈ ನಡುವೆ, 2014ರಲ್ಲಿ ಕೇರಳಕ್ಕೆ ಈ ಟ್ರೇಡ್ ಮಾರ್ಕ್ ಬಳಸದಂತೆ ಕರ್ನಾಟಕ ಸರ್ಕಾರ ಕೇರಳಕ್ಕೆ ನೋಟಿಸ್ ಜಾರಿ ಮಾಡಿತ್ತು. ಈ ಕುರಿತಂತೆ ವಿಚಾರಣೆ ನಡೆಸಿದ ಟ್ರೇಡ್ ಮಾರ್ಕ್ಗಳ ರಿಜಿಸ್ಟ್ರಿ, ಅಂತಿಮವಾಗಿ KSRTC ಕೇರಳದ ಆಸ್ತಿ ಎಂದು ಪ್ರಕಟಿಸಿದೆ.
KSRTC ಲೋಗೋ ಬಳಕೆ ವಿಚಾರವಾಗಿ ಕರ್ನಾಟಕ ಮತ್ತು ಕೇರಳ ನಡುವೆ ಇದ್ದ ವಿವಾದಕ್ಕೆ ಇದೀಗ ಬ್ರೇಕ್ ಬಿದ್ದಿದ್ದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (Karnataka State Road Transport Corporation) ಲೋಗೋವನ್ನು ಇನ್ನು ಮುಂದೆ ಕರ್ನಾಟಕ ಬಳಸುವಂತಿಲ್ಲ ಎಂದು ಕೇಂದ್ರ ಸರ್ಕಾರದ ಅಧೀನದದ ಟ್ರೇಡ್ ಮಾರ್ಕ್ ರಿಜಿಸ್ಟ್ರಿ ಆದೇಶ ಹೊರಡಿಸಿದೆ.