ಬೆಂಗಳೂರು: ರಾಜ್ಯದಲ್ಲಿ ಇನ್ನೂ ಕೂಡಾ ಕೊರೋನಾ ತಲ್ಲಣದ ಪರಿಸ್ಥಿತಿ ಇರುವುದರಿಂದಾಗಿ ಸರ್ಕಾರವು ಲಾಕ್‌ಡೌನ್ ವಿಸ್ತರಣೆಯ ಮಹತ್ವದ ತೀರ್ಮಾನವನ್ನು ಕೈಗೊಂಡಿದೆ. ಒಂದು ವಾರ ಕಾಲ ಕಠಿಣ ನಿಯಮ ಘೋಷಿಸುವ ಸಾಧ್ಯತೆಗಳಿವೆ.
ಈಗಾಗಲೇ ರಾಜ್ಯದಲ್ಲಿ ಲಾಕ್‌ಡೌನ್ ರೀತಿ ಕಠಿಣ ನಿಯಮವನ್ನು ಜಾರಿಮಾಡಿದೆ. ಜೂನ್ 7ರವರೆಗೂ ಈ ನಿಯಮ ಜಾರಿಯಲ್ಲಿದ್ದು ಈ ನಿಯಮಗಳನ್ನು ವಿಸ್ತರಿಸಬೇಕೇ ಅಥವಾ ಅನ್‌ಲಾಕ್ ಪ್ರಕ್ರಿಯೆ ಆರಂಭಿಸುವುದೇ ಎಂಬ ಬಗ್ಗೆ ತೀರ್ಮಾನಕ್ಕಾಗಿ ಸರ್ಕಾರವು ತಾಂತ್ರಿಕ ಸಲಹಾ ಸಮಿತಿಯ ವರದಿಯನ್ನು ಎದುರು ನೋಡುತ್ತಿತ್ತು. ತಾಂತ್ರಿಕ ಸಲಹಾ ಸಮಿತಿಯು ಈಗಾಗಲೇ ವರದಿ ನೀಡಿರುವ ಹಿನ್ನೆಲೆಯಲ್ಲಿ ಬುಧವಾರ ಸಿಎಂ ಯಡಿಯೂರಪ್ಪ ಅವರು ಆರೋಗ್ಯ ಸಚಿವ ಸುಧಾಕರ್, ಕೋವಿಡ್ ಉಸ್ತುವಾರಿ ಸಚಿವರಾದ ಡಿಸಿಎಂ ಅಶ್ವತ್ಥನಾರಾಯಣ್ ಹಾಗೂ ಹಿರಿಯ ಸಚಿವರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು. ಬಹುತೇಕ ಸಚಿವರು, ಅಧಿಕಾರಿಗಳು ಹಾಗೂ ತಜ್ಞರ ಅಭಿಪ್ರಾಯದಂತೆ ಲಾಕ್‌ಡೌನ್ ವಿಸ್ತರಣೆಗೆ ತೀರ್ಮಾನಿಸಲಾಯಿತು ಎನ್ನಲಾಗಿದೆ.
ಇಂದು ಸಂಜೆಯೊಳಗಾಗಿ ಲಾಕ್‌ಡೌನ್ ವಿಸ್ತರಣೆಯೋ ಅಥವಾ ಅನ್‌ಲಾಕ್ ಪ್ರಕ್ರಿಯೆ ಆರಂಭವೋ ಎಂಬ ಬಗ್ಗೆ ಸರ್ಕಾರ ಘೋಷಿಸುವ ಸಾಧ್ಯತೆಗಳಿವೆ. ಒಂದು ವೇಳೆ ಲಾಕ್‌ಡೌನ್ ವಿಸ್ತರಣೆಯಗುವುದಾದರೆ ಬಹಳಷ್ಟು ಕ್ಷೇತ್ರಗಳಿಗೆ ಅವಕಾಶ ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ.