ಬೆಂಗಳೂರು : ಕರ್ನಾಟಕ ರಾಜ್ಯ ಸರ್ಕಾರದ ಕೃಷ್ಣ ಭಾಗ್ಯ ಜಲ ನಿಗಮದಲ್ಲಿ ಕಳೆದ ಒಂದು ವರ್ಷದಿಂದ ಬರೋಬ್ಬರಿ ೨೩೨೬ ಕೋಟಿ ರೂಪಾಯಿಗಳ ಲೇಔಟ್ ಅಭಿವೃದ್ಧಿ ಟೆಂಡರ್ ಅಕ್ರಮವನ್ನು ವಕೀಲರೂ ಆದ ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಬಯಲಿಗೆಳೆದಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಕೋರಿ ಅವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.

ಕೃಷ್ಣ ಜಲ ಭಾಗ್ಯ ನಿಗಮದಲ್ಲಿ ಜಲ ಯೋಜನೆಗಳ ಜಾರಿಗಾಗಿ, ಪುನರ್ವಸತಿ ಕಾಯಿದೆ ಅಡಿಯಲ್ಲಿ ನ್ಯಾಯ ವ್ಯವಸ್ಥೆ ಮತ್ತು ಪುನರ್ ನಿರ್ಮಾಣಕ್ಕಾಗಿ ಲಕ್ಷಾಂತರ ಕೋಟಿ ರೂಪಾಯಿಗಳನ್ನು ವಿನಿಯೋಗ ಮಾಡಲಾಗಿದೆ. ಇದರಲ್ಲಿ ಕಳೆದ ಒಂದು ವರ್ಷದಿಂದ ನಿಗಮದ ವತಿಯಿಂದ ಅನೇಕ ಟೆಂಡರ್ ಗಳನ್ನು ಕರೆಯಲಾಗಿದ್ದು, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳ ಪಾರದರ್ಶಕ ಕಾಯಿದೆಯ ನಿಯಮಗಳನ್ನು ಉಲ್ಲಂಘನೆ ಮಾಡಿ ಗುತ್ತಿಗೆದಾರರಿಗೆ ಆರ್ಥಿಕ ಸಹಾಯ ಮಾಡುವ ಉದ್ದೇಶದಿಂದ ಅಕ್ರಮಗಳನ್ನು ಎಸಗಲಾಗಿದೆ ಎಂದು ರಮೇಶ್ ಬಾಬು ದೂರಿದ್ದಾರೆ.
ನಿಗಮಕ್ಕೆ ಮುಖ್ಯಮಂತ್ರಿಯೇ ಸಾರಥಿ:
ಕೃಷ್ಣ ಮೇಲ್ದಂಡೆ ಯೋಜನೆಯ ಅನುಷ್ಠಾನಕ್ಕಾಗಿ ಕೃಷ್ಣ ಭಾಗ್ಯ ಜಲ ನಿಗಮವನ್ನು ಸ್ಥಾಪಿಸಲಾಗಿರುತ್ತದೆ. ಕರ್ನಾಟಕದಲ್ಲಿ ಇದೊಂದು ಅತಿದೊಡ್ಡ ನೀರಾವರಿ ಯೋಜನೆಯಾಗಿದ್ದು, ಇದರ ಅನುಷ್ಠಾನಕ್ಕಾಗಿ ಮತ್ತು ಪುನರ್ವಸತಿ ಯೋಜನೆಯ ಅಡಿಯಲ್ಲಿ ಲಕ್ಷಾಂತರ ಕೋಟಿ ರೂಪಾಯಿಗಳ ವಿನಿಯೋಗ ಮಾಡಲಾಗಿದೆ. ಈ ನಿಗಮಕ್ಕೆ ಮುಖ್ಯಮಂತ್ರಿಗಳು ಅಧ್ಯಕ್ಷರಾಗಿದ್ದು, ಜಲಸಂಪನ್ಮೂಲ ಸಚಿವರು ಉಪಾಧ್ಯಕ್ಷರಾಗಿದ್ದು, ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಇತರೆ ಅಧಿಕಾರಿಗಳು ನಿಗಮದ ನಿರ್ದೇಶಕರಾಗಿರುತ್ತಾರೆ. ಚೀಫ್ ಇಂಜಿನಿಯರ್ ಹುದ್ದೆಯ ಒಬ್ಬರು ನಿಗಮದ ವ್ಯವಸ್ಥಾಪಕ ನರ‍್ದೇಶಕರಾಗಿದ್ದು, ನಿಗಮದ ಇತರೆ ಅಧಿಕಾರಿಗಳು ಇವರ ಕೈಕೆಳಗೆ ಕೆಲಸ ಮಾಡುತ್ತಾರೆ. ನಿಗಮದ ಒಟ್ಟಾರೆ ಆಡಳಿತಾತ್ಮಕ ಮತ್ತು ಹಣಕಾಸು ವ್ಯವಹಾರಗಳಿಗೆ ಆಡಳಿತ ಮಂಡಳಿ ಮತ್ತು ಅಧಿಕಾರಿ ಮಂಡಳಿಯವರು ಜವಾಬ್ದಾರಿ ಆಗಿರುತ್ತಾರೆ.
ನೀರಾವರಿ ಯೋಜನೆಗಳಿಂದ ಪ್ರಾರಂಭವಾಗಿ ಭೂ ಪರಿಹಾರ ನೀಡುವವರೆಗೆ ಎಲ್ಲ ಹಂತಗಳಲ್ಲಿ ಅಕ್ರಮಗಳನ್ನು ಎಸಗಲಾಗಿದ್ದು, ಕಳೆದ ಒಂದು ವರ್ಷದಿಂದ ನಡೆದಿರುವ ಎಲ್ಲಾ ಟೆಂಡರ್ ಗಳ ಮಾಹಿತಿ ಪಡೆದು ತನಿಖೆ ಮಾಡಬೇಕಾಗಿರುತ್ತದೆ ಎಂದಿರುವ ರಮೇಶ್ ಬಾಬು, ಸಾರ್ವಜನಿಕ ಹಣದ ಸಂರಕ್ಷಣೆ ಬಹಳ ಪ್ರಮುಖವಾಗಿದ್ದು, ಲೋಕಾಯುಕ್ತವು ಕೃಷ್ಣ ಭಾಗ್ಯ ಜಲ ನಿಗಮದ ಕಳೆದ ಒಂದು ರ‍್ಷದ ಟೆಂಡರ್ ಅವ್ಯವಹಾರಗಳಿಗೆ ಸಂಬಂಧ ಪಟ್ಟಂತೆ ವಿಶೇಷ ತನಿಖಾ ದಳವನ್ನು ರಚಿಸಿ ತನಿಖೆ ಮಾಡಬೇಕೆಂದು ಲೋಕಾಯುಕ್ತಕ್ಕೆ ಮನವಿ ಮಾಡಿದ್ದಾರೆ.
ಲಂಚಕ್ಕಾಗಿ ಕೊಂಚ ಮಾರ್ಪಾಡು..?
ಕೃಷ್ಣ ಮೇಲ್ದಂಡೆ ಯೋಜನೆಯ ಮೂರನೇ ಹಂತಕ್ಕೆ ಸಂಬಂಧಪಟ್ಟಂತೆ ಪುನರ್ವಸತಿ ಯೋಜನೆಯ ಅಡಿಯಲ್ಲಿ ಹಲವಾರು ಕರ್ಯಕ್ರಮ ರೂಪಿಸಲಾಗಿದೆ. ಯೋಜನೆಯ ಮೂರನೇ ಹಂತಕ್ಕೆ ಒಟ್ಟು ೧,೩೩,೮೬೭ ಎಕರೆ ಪ್ರದೇಶವನ್ನು ಭೂ ಸ್ವಾಧೀನ ಮಾಡಬೇಕಾಗಿದ್ದು, ಇದರಲ್ಲಿ ೪೪,೯೨೮ ಎಕರೆ ಭೂ ಸ್ವಾಧೀನ ಚಾಲ್ತಿಯಲ್ಲಿರುತ್ತದೆ. ಯೋಜನೆಯ ಮೂರನೇ ಹಂತಕ್ಕೆ ೦೯-೧೦-೨೦೧೭ರ ಸರ್ಕಾರಿ ಆದೇಶದ ಅನ್ವಯ ೫೧,೧೪೮ ಕೋಟಿ ರೂಪಾಯಿ ಪರಿಷ್ಕೃತ ಅಂದಾಜು ಮಾಡಲಾಗಿದ್ದು, ಇದರಲ್ಲಿ ಭೂ ಸ್ವಾಧೀನಕ್ಕಾಗಿ ೧೭,೬೨೭ ಕೋಟಿ ರೂಪಾಯಿ ಮೀಸಲಿಡಲಾಗಿದೆ. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳದೆ ಲೇಔಟ್ ಅಭಿವೃದ್ಧಿ ಸಾಧ್ಯವಿಲ್ಲ. ಆದರೆ ಕೃಷ್ಣ ಭಾಗ್ಯ ಜಲ ನಿಗಮದಲ್ಲಿ ಭೂಸ್ವಾಧೀನವೇ ಬಾಕಿಯಿರುವ ಪ್ರಕರಣದಲ್ಲಿ ಲೇಔಟ್ ಅಭಿವೃದ್ಧಿಗೆ ೨೩೨೬ ಕೋಟಿ ರೂಪಾಯಿಗಳ ಏಕ ಟೆಂಡರ್ ಕರೆಯುವುದರ ಮೂಲಕ ಅಕ್ರಮಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ರಮೇಶ್ ಬಾಬು ಅವರು ಬೊಟ್ಟು ಮಾಡಿದ್ದಾರೆ.
ಗ್ಲೋಬಲ್ ಟೆಂಡರ್ ಗಳ ಸಂದರ್ಭದಲ್ಲಿ ಎರಡು ಸಾವಿರ ಕೋಟಿ ರೂಪಾಯಿಗಳ ಅಥವಾ ಅದಕ್ಕೂ ಮೇಲ್ಪಟ್ಟ ಹಣಕ್ಕೆ ಟೆಂಡರ್ ಗಳನ್ನು ಕರೆಯಬಹುದು. ಸ್ಥಳೀಯ ಗುತ್ತಿಗೆದಾರರ ಜೊತೆಯಲ್ಲಿ ಶಾಮೀಲಾಗಿ ೨೩೨೬ ಕೋಟಿ ರೂಪಾಯಿಗಳ ಟೆಂಡರನ್ನು ನವೆಂಬರ್ ನಲ್ಲಿ ಕರೆದಿರುವ ಕೃಷ್ಣ ಭಾಗ್ಯ ಜಲ ನಿಗಮ, ತದನಂತರ ಸದರಿ ಟೆಂಡರ್ ರದ್ದು ಮಾಡಿ ಅದೇ ಟೆಂಡರನ್ನು 7 ಟೆಂಡರ್ ಗಳಾಗಿ ವಿಭಜಿಸಿ ಹೊಸ ಟೆಂಡರ್ ಕರೆದಿರುತ್ತದೆ. ಸದರಿ ಟೆಂಡರ್ ಗಳ ಮಾಹಿತಿ ಕೆಳಕಂಡಂತೆ ಇರುತ್ತದೆ:
-
BTDA/2022-23/OW/WORK_INDENT1352 – Estimated Cost. 560 Crore
-
BTDA/2022-23/OW/WORK_INDENT1353 – Estimated Cost.489 Crore
-
BTDA/2022-23/OW/WORK_INDENT1358 – Estimated Cost.471 Crore
-
BTDA/2022-23/OW/WORK_INDENT1359 – Estimated Cost.528 Crore
-
BTDA/2022-23/OW/WORK_INDENT1346 – Estimated Cost.
ಈ ಎಲ್ಲಾ ಟೆಂಡರ್ ಪ್ರಕ್ರಿಯೆಗಳಲ್ಲಿ ಕೇವಲ ನಾಲ್ಕು ಗುತ್ತಿಗೆದಾರರು ಭಾಗಿಯಾಗಿರುತ್ತಾರೆ. ಬಹುತೇಕ ಗುತ್ತಿಗೆ ಒಬ್ಬರೇ ಗುತ್ತಿಗೆದಾರರಿಗೆ ಹಂಚಿಕೆ ಆಗಿರುತ್ತದೆ. ಒಟ್ಟಾರೆ ಪ್ರಕ್ರಿಯೆ ಗಮನಿಸಿದರೆ ವ್ಯವಸ್ಥಿತವಾಗಿ ಮತ್ತು ಆತುರವಾಗಿ ಟೆಂಡರ್ ಕರೆದು ಗುತ್ತಿಗೆದಾರರಿಗೆ ಅನುಕೂಲ ಮಾಡುವ ದೃಷ್ಟಿಯಿಂದ ಪ್ರಕ್ರಿಯೆಗಳನ್ನು ಮಾಡಿರುವುದು ಕಂಡುಬರುತ್ತದೆ ಎಂದು ಹಗರಣವನ್ನು ರಮೇಶ್ ಬಾಬು ಅವರು ಎಲೆಎಲೆಯಾಗಿ ಬಿಡಿಸಿಟ್ಟಿದ್ದಾರೆ.
ಮೊದಲು ಇದೇ ಕಾಮಗಾರಿಯನ್ನು ೨೩೨೬ ಕೋಟಿಗಳಿಗೆ ಕರೆದು ನಂತರ ಇದನ್ನು ವಿಭಜಿಸಿ ಕೇವಲ ಎರಡು ತಿಂಗಳ ಅವಧಿಯಲ್ಲಿ ಪ್ರಕ್ರಿಯೆಗಳನ್ನು ಪೂಗೊಳಿಸಿ ಕಾಮಗಾರಿ ಹಂಚಿಕೆ ಮಾಡಲಾಗಿರುತ್ತದೆ. ಈ ಹಂಚಿಕೆಯಲ್ಲಿ ಕೆಟಿಟಿಪಿ ಕಾಯಿದೆಗಳ ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆ. ಈ ನಿಗಮದ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯ ನಿರ್ದೇಶಕರು ಕಂಪನಿಯ ನೀತಿಸಂಹಿತೆ, ಮೌಲ್ಯಗಳನ್ನು ಉಲ್ಲಂಘನೆ ಮಾಡಿರುತ್ತಾರೆ ಎಂದು ದೂರಿರುವ ರಮೇಶ್ ಬಾಬು, ನಿಗಮದ ಅಧಿಕಾರಿಗಳನ್ನು ಬಳಸಿಕೊಂಡು ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮಗಳನ್ನು ಎಸಗಿರುತ್ತಾರೆ. ಲೇಔಟ್ ನಿರ್ಮಾಣದ ಸುಮಾರು ಎರಡೂವರೆ ಸಾವಿರ ಕೋಟಿ ಟೆಂಡರ್ ಪ್ರಕ್ರಿಯೆ ಚುನಾವಣಾ ಸಂದರ್ದದಲ್ಲಿ ಆತುರವಾಗಿ ಮಾಡಿರುವುದು ಮತ್ತು ಅಕ್ರಮಗಳನ್ನು ಎಸಗಲು ಅವಕಾಶ ನೀಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ವಿವರಿಸಿದ್ದಾರೆ. ಈ ಭಾರೀ ಹಗರಣದ ಕುರಿತಂತೆ ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸಬೇಕೆಂದು ರಮೇಶ್ ಬಾಬು ಅವರು ಲೋಕಾಯುಕ್ತರನ್ನು ಕೋರಿದ್ದಾರೆ.
ಚುನಾವಣಾ ಸಮಯದಲ್ಲಿ ಸರ್ಕಾರ ಅಕ್ರಮ ಎಸಗುವುದರ ಮೂಲಕ ದೊಡ್ಡ ಮಟ್ಟದ ಭ್ರಷ್ಟಾಚಾರಕ್ಕೆ ಅವಕಾಶ ನೀಡಲಾಗಿರುವುದರಿಂದ ಈ ಟೆಂಡರ್ ಪ್ರಕ್ರಿಯೆಗೆ ಸಂಬಂಧಪಟ್ಟಂತೆ ಎಲ್ಲಾ ದಾಖಲೆಗಳನ್ನು ವಶಪಡಿಸಿಕೊಂಡು, ಸದರಿ ಟೆಂಡರ್ ಗೆ ತಡೆ ನೀಡುವುದರ ಮೂಲಕ ವಿಶೇಷ ತನಿಖೆಗೆ ಒಳಪಡಿಸಲು ಮತ್ತು ಶಾಮೀಲಾಗಿರುವವರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಬೇಕೆಂದು ಲೋಕಾಯುಕ್ತವನ್ನು ಆಗ್ರಹಿಸಿದ್ದಾರೆ.