ದೆಹಲಿ: ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್ ಗೆದ್ದು ಬೀಗಿದರೂ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆಯು ಪಕ್ಷದ ಹೈಕಮಾಂಡ್ ಪಾಲಿಗೆ ಗಜಪ್ರಸವ ಎಂಬಂತಾಗಿದೆ. ಪ್ರಚಂಡ ಜಯಭೇರಿ ಭಾರಿಸಿರುವ ಕಾಂಗ್ರೆಸ್ ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬರಲು ಕ್ಷಣಗಣನೆ ಆರಂಭವಾಗಿದ್ದು ನೂತನ ಸಿಎಂ ಆಯ್ಕೆಯ ಕಸರತ್ತು ಇದೀಗ ಕ್ಲೈಮ್ಯಾಕ್ಸ್ ಘಟ್ಟದಲ್ಲಿದೆ.
ಕಾಂಗ್ರೆಸ್ ಸುದೀರ್ಘ ಸರ್ಕಸ್..
ಮುಖ್ಯಮಂತ್ರಿ ಸ್ಥಾನಕ್ಕೆ ನಾಯಕನ ಆಯ್ಕೆ ಸಂಬಂಧ ಹಲವು ದಿನಗಳಿಂದ ಕಾಂಗ್ರೆಸ್ನಲ್ಲಿ ಸರ್ಕಸ್ ನಡೆದಿದ್ದು ಅಂತಿಮವಾಗಿ ಇಂದು ಸಂಜೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಬೆಂಗಳೂರಿನಲ್ಲಿರುವ ಕೆಪಿಸಿಸಿ ಕಚೇರಿ ಇಂದಿರಾ ಗಾಂಧಿ ಭವನದಲ್ಲಿ ಈ ಸಭೆ ನಡೆಯಲಿದ್ದು ವಿಧಾನಸಭೆಗೆ ಆಯ್ಕೆಯಾಗಿರುವ ಎಲ್ಲಾ ಸದಸ್ಯರಿಗೆ, ವಿಧಾನಪರಿಷತ್ ಸದಸ್ಯರಿಗೆ, ಸಂಸದರಿಗೆ ಬುಲಾವ್ ನೀಡಲಾಗಿದೆ. ಎಲ್ಲಾ ಶಾಸಕರು ಸಂಸದರು ಈ ಸಭೆಯಲ್ಲಿ ಭಾಗವಹಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಂದೇಶ ರವಾನಿಸಿದ್ದಾರೆ.
ಯಾರಾಗ್ತಾರೆ ಸಿಎಂ?
ಕಾಂಗ್ರೆಸ್ ಜಯಭೇರಿ ಭಾರಿಸಿದ್ದರೂ ಮುಖ್ಯಮಂತ್ರಿ ಸ್ಥಾನಕ್ಕೆ ನಾಯಕನನ್ನು ಆಯ್ಕೆ ಮಾಡುವ ವಿಚಾರದಲ್ಲಿ ಪಕ್ಷದ ಪ್ರಮುಖರು ಪ್ರಯಾಸಪಟ್ಟಿದ್ದಾರೆ. ಮುಂದಿನ ಒಂದು ವರ್ಷದಲ್ಲಿ BBMP ಚುನಾವಣೆ, ಜಿಲ್ಲಾ ಪಂಚಾಯತ್ ಚುನಾವಣೆ, ಸಹಕಾರಿ ಸಂಘಗಳ ಚುನಾವಣೆಗಳು ನಡೆಯಲಿವೆ. ಈ ಚುನಾವಣೆಗಳೇ ರಾಜಕೀಯ ಪಕ್ಷಗಳ ಅಸ್ತಿತ್ವಕ್ಕೆ ಮೂಲಾಧಾರ. ಹಾಗಾಗಿ ಮುಂಬರುವ ನಾಲ್ಕೂ ಚುನಾವಣೆಗಳಲ್ಲೂ ಯಶೋಗಾಥೆ ಬರೆಯಬೇಕಾದರೆ ಉತ್ತರ ಕರ್ನಾಟಕದಲ್ಲಿ ಈಗಿರುವ ಅವಕಾಶವನ್ನು ಬಳಸಬೇಕಿದೆ. ಕುರುಬ ಸಮುದಾಯ ಹಾಗೂ ಲಿಂಗಾಯತ ಸಮುದಾಯದ ಪ್ರಾಬಲ್ಯದ ಈ ಭಾಗದಲ್ಲಿ ಅಂತಹಾ ಅವಕಾಶವನ್ನು ಬಾಚಿಕೊಳ್ಳಲು ಸದ್ಯದ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರೇ ಸೂಕ್ತ ಎಂಬುದು ಹೈಕಮಾಂಡ್ ಅಭಿಪ್ರಾಯ. ಲೋಕಸಭಾ ಚುನಾವಣೆ ನಂತರ ಡಿ.ಕೆ.ಶಿವಕುಮಾರ್ ಅವರನ್ನು ಸಿಎಂ ಆಗಿ ಮಾಡುವ ಯೋಚನೆ ರಾಹುಲ್ ಗಾಂಧಿಯವರದ್ದು.
ಈ ಮಧ್ಯೆ, ಪೂರ್ಣಾವಧಿ ತಾವೇ ಸಿಎಂ ಆಗಬೇಕೆಂಬ ಪಟ್ಟು ಸಿದ್ದರಾಮಯ್ಯ ಅವರದ್ದಾದರೆ, ಜನರ ಆಶಯದಂತೆ ಈಗಿನಿಂದಲೇ ತಾವೇ ಮುಖ್ಯಮಂತ್ರಿ ಆಗಬೇಕೆಂಬ ಹಠ ಡಿ.ಕೆ.ಶಿವಕುಮಾರ್ ಅವರದ್ದು. ಹಾಗಾಗಿ ರಾಹುಲ್ ಗಾಂಧಿ, ಖರ್ಗೆ ಸಹಿತ ಎಐಸಿಸಿ ಪ್ರಮುಖರು ನಡೆಸಿದ ಸರಣಿ ಸಂಧಾನ ಸಭೆಗಳು ಫಲ ಕೊಡಲಿಲ್ಲ.
ಈ ನಡುವೆ, ಕಳೆದ ರಾತ್ರಿ ಕಾಂಗ್ರೆಸ್ ವರಿಷ್ಠರು ನೀಡಿರುವ ಸಲಹೆಯನ್ನು ಒಲ್ಲದ ಮನಸಿಸನಲ್ಲಿ ಸ್ವೀಕರಿಸಿರುವ ಈ ಇಬ್ಬರೂ ನಾಯಕರು ಇಂದು ಸಂಜೆಯ ಶಾಸಕಾಂಗ ಪಕ್ಷದಲ್ಲಿನ ತೀರ್ಮಾನದಂತೆ ನಡೆದುಕೊಳ್ಳಲು ಒಪ್ಪಿಕೊಂಡಿದ್ದಾರೆನ್ನಲಾಗಿದೆ. ಹಾಗಾಗಿ ಸಂಜೆ ನಡೆಯುವ ಶಾಸಕಾಂಗ ಪಕ್ಷದ ಸಭೆ ತೀವ್ಯ ಕುತೂಹಲ ಮೂಡಿಸಿದೆ.
ಅಂತಿಮವಾಗಿ ಸಿದ್ದರಾಮಯ್ಯ ಅವರನ್ನೇ ಮುಖ್ಯಮಂತ್ರಿ ಮಾಡುವ ಬಗ್ಗೆ ಹೈಕಮಾಂಡ್ ಒಲವು ಹೊಂದಿದೆ. ಇದೇ ವೇಳೆ ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ ಅವರಿಗೆ ಆಲ್ ದಿ ಬೆಸ್ಟ್ ಎಂದು ಹೇಳುವ ಮೂಲಕ ಸಿಎಂ ಆಯ್ಕೆ ಬಗ್ಗೆ ಇದ್ದ ಎಲ್ಲಾ ಕುತೂಹಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದರು.
ಇದೇ ವೇಳೆ, ಡಿ.ಕೆ.ಶಿವಕುಮಾರ್ ಅವರನ್ಬು ಉಪಮುಖ್ಯಮಂತ್ರಿ ಮಾಡಿ ಎರಡು ಪ್ರಮುಖ ಖಾತೆಗಳನ್ನು ವಹಿಸಲು ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿಸಲು ಹೈಕಮಾಂಡ್ ನಿರ್ಧರಿಸಿದೆ ಎನ್ನಲಾಗಿದೆ. ಆದರೆ ಡಿಕೆಶಿ ಹಾಗೂ ಅವರ ಬೆಂಬಲಿಗರು ಇದಕ್ಕೆ ಒಪ್ಪುವರೇ ಎಂಬುದು ಕುತೂಹಲಕಾರಿ ಪ್ರಶ್ನೆಯಾಗಿದೆ.