ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆ ಗೇಟ್ ಬಳಿ ಎರಡು ಕಾರುಗಳ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂರು ವರ್ಷದ ಮಗು ಸೇರಿದಂತೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಮತ್ತೂ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.
ವೋಕ್ಸ್ವ್ಯಾಗನ್ ಹಾಗೂ ಕಿಯಾ ಸೋನೆಟ್ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಚಿಕ್ಕನಾಯಕನಹಳ್ಳಿ ಕಡೆಯಿಂದ ಮೂವರು ಪ್ರಯಾಣಿಸುತ್ತಿದ್ದ ವೋಕ್ಸ್ವ್ಯಾಗನ್ ಕಾರು ಓವರ್ಟೇಕ್ ಮಾಡಲು ಮುಂದಾದ ವೇಳೆ, ಎದುರಿನಿಂದ ತುರುವೇಕೆರೆ ಕಡೆಯಿಂದ ಐವರು ಪ್ರಯಾಣಿಸುತ್ತಿದ್ದ ಕಿಯಾ ಸೋನೆಟ್ ಕಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಡಿಕ್ಕಿಯ ರಭಸಕ್ಕೆ ವೋಕ್ಸ್ವ್ಯಾಗನ್ ಕಾರಿನಲ್ಲಿದ್ದ ಚಿಕ್ಕನಾಯಕನಹಳ್ಳಿ ಮೂಲದ ವಿವೇಕ್ ಹಾಗೂ ಪವನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಿಯಾ ಸೋನೆಟ್ ಕಾರಿನಲ್ಲಿದ್ದ ತುರುವೇಕೆರೆ ಮೂಲದ ಚಾಲಕ ದಾವೂದ್ ಹಾಗೂ ಮೂರು ವರ್ಷದ ಮಗು ಕೂಡ ಮೃತಪಟ್ಟಿದೆ.
ಅಪಘಾತದಲ್ಲಿ ಗಾಯಗೊಂಡ ನಾಲ್ವರನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನೆಯ ಮಾಹಿತಿ ತಿಳಿದು ಚಿಕ್ಕನಾಯಕನಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತದ ಕುರಿತು ತನಿಖೆ ಕೈಗೊಂಡಿದ್ದಾರೆ.






































































