ದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸುವ ಸಾಧ್ಯತೆಗಳಿವೆ ಎಂಬ ಆತಂಕ ಕಾಂಗ್ರೆಸ್ ನಾಯಕರನ್ನು ಕಾಡುತ್ತಿದೆ. ಇಡಿ ಅಧಿಕಾರಿಗಳು ರಾಹುಲ್ ಗಾಂಧಿಯವರನ್ನು ವಿಚಾರಣೆಗೆ ಗುರಿಪಡಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ದೇಶಾದ್ಯಂತ ಹೋರಾಟ ನಡೆಸುತ್ತಿದ್ದಾರೆ.
ಈ ನಡುವೆ ದೆಹಲಿಗೆ ದೌಡಾಯಿಸಿರುವ ಹೆಚ್.ಕೆ.ಪಾಟೀಲ್ ಸಹಿತ ಪ್ರದೇಶ ಕಾಂಗ್ರೆಸ್ ನಾಯಕರು ಮಂಗಳವಾರ ಬೆಳಿಗ್ಗೆ ಎಐಸಿಸಿ ನಾಯಕ ರಾಹುಲ್ ಗಾಂಧಿಯನ್ನು ಭೇಟಿ ಮಾಡುವ ಪ್ರಯತ್ನ ನಡೆಸಿದರು. ಆದರೆ ಮಾರ್ಗ ಮಧ್ಯೆಯೇ ಅವರನ್ನು ದೆಹಲಿ ಪೊಲೀಸರು ತಡೆದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು. ಇದರಿಂದ ಕುಪಿತರಾದ ಪೊಲೀಸರು ಸಂಸದ ಡಿ.ಕೆ.ಸುರೇಶ್, ದಿನೇಶ್ ಗುಂಡೂರಾವ್, ಹೆಚ್.ಕೆ.ಪಾಟೀಲ್ ಸಹಿತ ಹಲವು ನಾಯಕರನ್ನು ಬಂಧಿಸಿದರು.
ಬಿಜೆಪಿ ಸರ್ಕಾರದ ವಿರುದ್ಧ ಹೋರಾಟವು ಮತ್ತೊಮ್ಮೆ ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ದದ ಹೋರಾಟವನ್ನು ನೆನಪಿಸುತ್ತಿದೆ.
ಹೋರಾಡುತ್ತೇವೆ, ದೇಶವನ್ನು ಫ್ಯಾಸಿಸ್ಟ್ ಶಕ್ತಿಗಳಿಂದ ಮುಕ್ತಗೊಳಿಸುತ್ತೇವೆ, ಆ ಬದ್ಧತೆ ನಮಗಿದೆ,
ಜನಪ್ರತಿನಿಧಿಗಳೊಂದಿಗೆ ಪೊಲೀಸರ ಈ ನಡವಳಿಕೆ ಪ್ರಜಾಪ್ರಭುತ್ವವನ್ನು ಅಣಕಿಸುವಂತಿದೆ.#IndiaWithRahulGandhi pic.twitter.com/beyEjzJ8sj
— Karnataka Congress (@INCKarnataka) June 14, 2022
ದೆಹಲಿಯ ನರೇಲಾ ಠಾಣೆ ಪೊಲೀಸರು ಈ ಕ್ರಮ ಕೈಗೊಂಡಿದ್ದು, ಪೊಲೀಸರ ವರ್ತನೆಯನ್ನು ಕೈ ನಾಯಕರು ಖಂಡಿಸಿದರು. ಪೊಲೀಸರು ದೌರ್ಜನ್ಯ ನಡೆಸಿ ತಮ್ಮ ನಾಯಕರನ್ನು ವಶಕ್ಕೆ ಪಡೆದಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.





















































