ಕೊಡಗು: ಕೊಡಗಿನ ಪವಿತ್ರ ಕ್ಷೇತ್ರ ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವ ಅತ್ಯಂತ ಶ್ರದ್ಧಾಭಕ್ತಿಯಿಂದ ನೆರವೇರಿತು. ಮೇಷ ಲಗ್ನದಲ್ಲಿ ಕಾವೇರಿ ಕುಂಡಿಕೆಯಿಂದ ತೀರ್ಥರೂಪಿಣಿಯಾಗಿ ಕಾವೇರಿ ಮಾತೆ ಉದ್ಭವಿಸಿದ ಪವಿತ್ರ ಕ್ಷಣಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾದರು.
ಕಾವೇರಿ ಮಾತೆಯ ದರ್ಶನ ಪಡೆಯಲು ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ತಲಕಾವೇರಿಗೆ ಆಗಮಿಸಿದ್ದರು. ನೆರೆಯ ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳದಿಂದಲೂ ಭಕ್ತರು ಭೇಟಿ ನೀಡಿ ದೇವಿಯ ದರ್ಶನ ಪಡೆದರು.
ತೀರ್ಥೋದ್ಭವದ ಪವಿತ್ರ ಸಂದರ್ಭದಲ್ಲಿ ಅರ್ಚಕರು ಭಕ್ತರ ಮೇಲೆ ತೀರ್ಥ ಪ್ರೋಕ್ಷಣೆ ಮಾಡಿದರು. ಈ ವೇಳೆ ಭಕ್ತರು ‘ಕಾವೇರಿ ಮಾತೆ ಕಿ ಜೈ’ ಎಂಬ ಘೋಷಣೆಗಳನ್ನು ಮೊಳಗಿಸಿ ಸಂಭ್ರಮಿಸಿದರು. ಇಡೀ ಕ್ಷೇತ್ರದಲ್ಲಿ ಧಾರ್ಮಿಕ ವಾತಾವರಣ ಮನೆಮಾಡಿತ್ತು.
ತೀರ್ಥೋದ್ಭವಕ್ಕೆ ಭಕ್ತರ ಭಾರೀ ಜನಸಂದಣಿ ನಿರೀಕ್ಷಿಸಿದ್ದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದವು. ಭದ್ರತೆಗಾಗಿ 500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು.

ಜನದಟ್ಟಣೆ ನಿಯಂತ್ರಿಸುವುದು, ಸಂಚಾರ ವ್ಯವಸ್ಥೆ ಸುಗಮಗೊಳಿಸುವುದು ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಕೊಡಗು ಪೊಲೀಸರು ಕ್ರಮ ಕೈಗೊಂಡಿದ್ದರು.
ಭಕ್ತರಿಗೆ ಸುಗಮವಾಗಿ ಕಾವೇರಿ ಮಾತೆಯ ದರ್ಶನ ಪಡೆಯಲು ಹಾಗೂ ತೀರ್ಥಸ್ನಾನಕ್ಕೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿತ್ತು. ಧಾರ್ಮಿಕ ವಿಧಿವಿಧಾನಗಳು ಮತ್ತು ಭದ್ರತಾ ವ್ಯವಸ್ಥೆಗಳ ನಡುವೆ ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವ ಸಂಭ್ರಮದಿಂದ ನೆರವೇರಿತು.















































































