ಮಂಗಳೂರು: ಪುರಾಣ ಪ್ರಸಿದ್ದ ಕಟೀಲು ಕ್ಷೇತ್ರ ಅನೇಕಾನೇಕ ಕೈಂಕರ್ಯಗಳಿಂದಾಗಿ ನಾಡಿನ ಗಮನಸೆಳೆಯುತ್ತಲಿದೆ. ಈ ನಡುವೆ ಕಟೀಲಿನಲ್ಲಿಂದು ನಡೆದ ಸಮಾರಂಭ ಅನನ್ಯ ವಿಶೇಷತೆಗೆ ಸಾಕ್ಷಿಯಾಯಿತು.
ಅನ್ನ ದಾಸೋಹ, ಅಕ್ಷರ ದಾಸೋಹದ ಮೂಲಕ ನಾಡಿನ ಆಸ್ತಿಕ ಸಮುದಾಯದ ಪಾಲಿಗೆ ಅಭಯ ನೀಡುವ ದೇವಿಯ ಕ್ಷೇತ್ರದ ವತಿಯಿಂದ ಗುರು ವೈಭವ ಕಾರ್ಯಕ್ರಮ ನೆರವೇರಿತು. ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಸಮೂಹ ಶಿಕ್ಷಣ ಸಂಸ್ಥೆಗಳ 125 ಶಿಕ್ಷಕರ ಉಪಸ್ಥಿತಿಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ, ಕಟೀಲು ವಿದ್ಯಾ ಸಂಸ್ಥೆಗಳಿಂದ ನಿವೃತ್ತಿಗೊಂಡ ಉಪನ್ಯಾಸಕರನ್ನು ಗೌರವಿಸಲಾಯಿತು.
ನಿವೃತ್ತ ಗುರುಗಳಾದ ಶಂಕರನಾರಾಯಣ ನಾಯಕ್, ವಿಜಯ್ ಕುಮಾರ್, ಸುರೇಶ್, ಜಗದೀಶ್ಚಂದ್ರ ಕೆ.ಕೆ, ಶ್ರೀಮತಿ ಶ್ವೇತಾ ಮಾಡ, ಗಣೇಶ್ ಡಿ, ಶ್ರೀಮತಿ ಅಪರ್ಣ ಹಾಗೂ ಸಂಘಟಕ, ಸಮಾಜ ಸೇವಕ, ಆದರ್ಶ ಶಿಕ್ಷಕ ಉಡುಪಿಯ ಮುರಲೀ ಕಡೇಕಾರ್ ಇವರನ್ನು ಸನ್ಮಾನಿಸಲಾಯಿತು. ಪ್ರಶಸ್ತಿ-ಸ್ಮರಣಿಕೆ ನೀಡಿ ಅಭಿನಂಧಿಸಲಾಯಿತು. ಈ ಸಂದರ್ಭದಲ್ಲಿ ದೇವಾಲಯದ ಪ್ರಮುಖರು, ಅರ್ಚಕರು ಉಪಸ್ಥಿತರಿದ್ದರು.