ಪುತ್ತೂರು (ದಕ್ಷಿಣಕನ್ನಡ): ಸ್ವಾತಂತ್ರ್ಯ ಅಮೃತ ಮಹೋತ್ಸವದ ಶುಭ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರ, ತುಳು ಕನ್ನಡ ಸಾಹಿತಿ, ಯಕ್ಷಗಾನ ಕ್ಷೇತ್ರಕ್ಕೆ ಹೊಸ ಆಯಾಮವನ್ನು ನೀಡಿದಂತಹ ಅರ್ಥಧಾರಿ, ಪತ್ರಿಕೋದ್ಯಮಿ, ಭಾಷಾಂತರಕಾರ, ಅಪ್ರತಿಮ ವಾಗ್ಮಿ ಹಾಗೂ ದೀನದಲಿತರ ಸೇವಕನಾಗಿ ದುಡಿದಂತಹ ದೇಶಭಕ್ತ ಎನ್. ಎಸ್ ಕಿಲ್ಲೆಯವರ ನೆನಪಿಗಾಗಿ, ದೇಶಭಕ್ತ ಎನ್. ಎಸ್ ಕಿಲ್ಲೆ ಪ್ರತಿಷ್ಠಾನದಿಂದ ಕೊಡಮಾಡುವ ಕಿಲ್ಲೆ ಸಂಸ್ಮರಣ ಸನ್ಮಾನವನ್ನು ಡಾ| ಪಾಲ್ತಾಡಿ ರಾಮಕೃಷ್ಣ ಆಚಾರ್ಯರಿಗೆ ನೀಡಲಾಯಿತು.
“ಈ ಸನ್ಮಾನ ನನಗೆ ಖುಷಿ ನೀಡಿದೆ. ಇದೊಂದು ಅಪರೂಪದ ಯೋಗ ಮತ್ತು ನೆನಪಿನ ಕಾರ್ಯಕ್ರಮವಾಗಿದೆ. ಏಳನೇ ತರಗತಿಯಲ್ಲಿರುವಾಗ ಕಿಲ್ಲೆಯವರನ್ನು ನೋಡಿದ ನೆನಪು. ಅವರ ವ್ಯಕ್ತಿತ್ವಕ್ಕೆ ಹೋಗಿದ್ದೆ. ಅವರಲ್ಲಿದ್ದ ಸ್ವಾತಂತ್ರ್ಯದ ನೆನಪುಗಳನ್ನು ಓದಿರುವುದನ್ನು ನೆನೆಸಿಕೊಂಡಾಗ ಇಂದಿಗೂ ದುಃಖ ಉಮ್ಮಲಿಸುತ್ತದೆ. ಅವರ ಜನ್ಮ ಶತಾಬ್ದಿಯಲ್ಲಿ ಅವರ ಬಗೆಗಿನ ಕಾರ್ಯಕ್ರಮಗಳನ್ನು ಮಾಡಿದ ನೆನಪು ಇನ್ನೂ ಹಸಿರಾಗಿದೆ. ಅಂತಿರುವಾಗ ಅವರ ಅಳಿಯ ಹಾಗೂ ನನ್ನ ಆತ್ಮೀಯರು ಗೆಳೆಯರು ಆದಂತಹ ಕಡಮಜಲು ಸುಭಾಷ್ ಮಾಡಿರುವಂತಹ ಅವರ ಹೆಸರಿನ ಸನ್ಮಾನವನ್ನು ಸ್ವೀಕರಿಸಿರುವುದು ತುಂಬಾನೇ ಸಮಾಧಾನ ಹಾಗೂ ಸಂತೋಷವನ್ನು ನೀಡಿದೆ.” ಎಂದು ಸನ್ಮಾನವನ್ನು ಸ್ವೀಕರಿಸಿ ಪಾಲ್ತಾಡಿ ರಾಮಕೃಷ್ಣ ಆಚಾರ್ಯರು ಮನದ ಮಾತನ್ನು ಹಂಚಿಕೊಂಡರು.
ಈ ಕಾರ್ಯಕ್ರಮದಲ್ಲಿ ದೇಶಭಕ್ತ ಎನ್. ಎಸ್ ಕಿಲ್ಲೆ ಪ್ರತಿಷ್ಠಾನದ ಅಧ್ಯಕ್ಷರಾದ ಕಡಮಜಲು ಸುಭಾಷ್ ರೈ, ಕೋಶಾಧಿಕಾರಿ ಕೆದಂಬಾಡಿ ಬಿಡು ಚಂದ್ರಹಾಸ ಬಲ್ಲಾಳ್, ಪುತ್ತೂರು ಕೃಷಿಕ ಸಮಾಜದ ಅಧ್ಯಕ್ಷರಾದ ವಿಜಯಕುಮಾರ್ ರೈ ಕೋರಂಗ, ಪ್ರೀತಿ ಸುಭಾಷ್ ರೈ ಹಾಗೂ ಪಾಲ್ತಾಡಿಯವರ ಕುಟುಂಬದವರಾದ ಸುಮಾ ಆಚಾರ್, ಡಾ| ಸುಪ್ರಿಯಾ, ನಿಸ್ವನ, ಅವಲೋಹಿತರು ಜೊತೆಗಿದ್ದರು.
ಕಿಲ್ಲೆ ಪ್ರತಿಷ್ಠಾನದ ಗೌರವ ಕಾರ್ಯದರ್ಶಿಗಳಾದ ಮುಂಡಾಳಗುತ್ತು ಪ್ರಶಾಂತ್ ರೈ ಪಂಜ ಕಾರ್ಯಕ್ರಮವನ್ನು ನಿರೂಪಿಸಿ, ಪ್ರಾಸ್ತಾವಿಕ ಮಾತುಗಳೊಂದಿಗೆ ಪ್ರತಿಷ್ಠಾನದ ಸಾಧನೆಗಳನ್ನು ಪರಿಚಯಿಸಿದರು.