ಬೆಂಗಳೂರು: 2026ನೇ ಸಾಲಿನ ಕೇಂದ್ರ ಗೃಹ ಸಚಿವರ ದಕ್ಷತಾ ಪದಕಕ್ಕೆ ಕರ್ನಾಟಕದ ಏಳು ಪೊಲೀಸ್ ಹಾಗೂ ವಿಧಿವಿಜ್ಞಾನ ಅಧಿಕಾರಿಗಳು ಆಯ್ಕೆಯಾಗಿದ್ದಾರೆ. ಅಪರಾಧ ತನಿಖೆಯಲ್ಲಿ ಅತ್ಯುತ್ತಮ ಸೇವೆ, ವೃತ್ತಿಪರ ದಕ್ಷತೆ ಮತ್ತು ಕರ್ತವ್ಯನಿಷ್ಠೆ ತೋರಿದ ದೇಶದ ಒಟ್ಟು 490 ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಈ ಬಾರಿ ಪದಕ ಘೋಷಿಸಲಾಗಿದೆ.
ಕರ್ನಾಟಕದಿಂದ ಪದಕಕ್ಕೆ ಆಯ್ಕೆಯಾದವರಲ್ಲಿ ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖೆ ನಡೆಸಿದ್ದ ಇನ್ಸ್ಪೆಕ್ಟರ್ ಶೋಭಾ ಎನ್. ಪ್ರಮುಖರಾಗಿದ್ದಾರೆ. ಬೆಳಗಾವಿಯ ಇನ್ಸ್ಪೆಕ್ಟರ್ ಬಾವುದ್ದೀನ್ ರುಕ್ಮುದ್ದೀನ್ ಗಡೇಕರ್, ಬೆಂಗಳೂರು ಪೊಲೀಸ್ ಪ್ರಧಾನ ಕಚೇರಿಯ ಇನ್ಸ್ಪೆಕ್ಟರ್ ಎಂ. ಶ್ರೀನಿವಾಸ್ ರಾವ್ ಹಾಗೂ ರಾಯಚೂರಿನ ದೇವದುರ್ಗ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಂಜುನಾಥ್ ಅವರೂ ಈ ಗೌರವಕ್ಕೆ ಪಾತ್ರರಾಗಿದ್ದಾರೆ.

ಇದಲ್ಲದೆ, ಬೆಂಗಳೂರು ಪೂರ್ವ ವಿಭಾಗದ ಸಹಾಯಕ ಸಬ್ಇನ್ಸ್ಪೆಕ್ಟರ್ (ಎಎಸ್ಐ) ರತ್ನಮ್ಮ ಕೆ., ಅಪರಾಧ ತನಿಖಾ ದಳದ (ಸಿಐಡಿ) ಮುಖ್ಯ ಹೆಡ್ ಕಾನ್ಸ್ಟೆಬಲ್ (ಸಿಹೆಚ್ಸಿ) ಬಾಲಕೃಷ್ಣ ವೈ. ಹಾಗೂ ಮೈಸೂರಿನ ಪ್ರಾದೇಶಿಕ ವಿಧಿವಿಜ್ಞಾನ ಪ್ರಯೋಗಾಲಯದ (ಆರ್ಎಫ್ಎಸ್ಎಲ್) ಉಪನಿರ್ದೇಶಕ ಡಾ. ಚಂದ್ರಶೇಖರ್ ಅವರು ಪದಕಕ್ಕೆ ಆಯ್ಕೆಯಾಗಿದ್ದಾರೆ.
ರಾಷ್ಟ್ರೀಯ ಏಕತಾ ದಿನದ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವಾಲಯವು 2026ನೇ ಸಾಲಿನ ಪದಕ ಪುರಸ್ಕೃತರ ಪಟ್ಟಿಯನ್ನು ಪ್ರಕಟಿಸಿದೆ. ಕರ್ನಾಟಕದ ಏಳು ಅಧಿಕಾರಿಗಳ ಸಾಧನೆಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.














































































