ಗ್ವಾದರ್: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಗ್ವಾದರ್ ಜಿಲ್ಲೆಯಲ್ಲಿ ‘ಆಪರೇಷನ್ ಅಲ್ಮಾಸ್’ ಹೆಸರಿನಲ್ಲಿ ಸರಣಿ ದಾಳಿ ನಡೆಸಿರುವುದಾಗಿ ಬಲೂಚ್ ಲಿಬರೇಷನ್ ಫ್ರಂಟ್ (ಬಿಎಲ್ಎಫ್) ಹೇಳಿಕೊಂಡಿದೆ. ದಾಳಿಗಳಲ್ಲಿ 80ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಸಂಘಟನೆ ಪ್ರತಿಪಾದಿಸಿದ್ದು, ಈ ಸಂಖ್ಯೆಗೆ ಸ್ವತಂತ್ರ ದೃಢೀಕರಣ ಲಭ್ಯವಾಗಿಲ್ಲ.
ಸೇನಾ ಶಿಬಿರಗಳು ಮತ್ತು ಗುಪ್ತಚರ ಕಚೇರಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಫ್ರಾಂಟಿಯರ್ ವರ್ಕ್ಸ್ ಆರ್ಗನೈಸೇಶನ್ ಶಿಬಿರದ ಪ್ರವೇಶದ್ವಾರದಲ್ಲಿ ವಾಹನ ಬಾಂಬ್ ಸ್ಫೋಟ ನಡೆಸಲಾಗಿದೆ ಎಂದು ಸಂಘಟನೆ ತಿಳಿಸಿದೆ. ಐಎಸ್ಐ ಅಧಿಕಾರಿಯೊಬ್ಬರು ಸೇರಿದಂತೆ ಹಲವು ಸಿಬ್ಬಂದಿ ಹತರಾಗಿದ್ದಾರೆ ಎಂದೂ ಹೇಳಿದೆ.

ವಸತಿ ಕಟ್ಟಡದಲ್ಲಿ ನಡೆದ ಸಂಘರ್ಷ, ಗುಂಡಿನ ಚಕಮಕಿ ಹಾಗೂ ನಂತರದ ಸೇನಾ ಕಾರ್ಯಾಚರಣೆಯಲ್ಲಿ ಹಲವು ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಬಿಎಲ್ಎಫ್ ಆರೋಪಿಸಿದೆ. ಚೀನಾ–ಪಾಕಿಸ್ತಾನ ಆರ್ಥಿಕ ಕಾರಿಡಾರ್ ಸೇರಿದಂತೆ ಹಲವು ಯೋಜನೆಗಳನ್ನು ಗುರಿಯಾಗಿಸುವುದಾಗಿ ಸಂಘಟನೆ ಎಚ್ಚರಿಸಿದೆ.













































































