ನವದೆಹಲಿ: ಹೊರ್ಮುಜ್ ಜಲಸಂಧಿಯಲ್ಲಿ ಪನಾಮ ಧ್ವಜದ ‘ಎಂಟಿ ಲೂಯಿಸ್ 1’ ತೈಲ ಟ್ಯಾಂಕರ್ ಮೇಲೆ ಲಿಂಪೆಟ್ ಮೈನ್ ದಾಳಿ ನಡೆದಿದೆ. ಹಡಗಿನಲ್ಲಿದ್ದ 27 ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ದುಷ್ಕರ್ಮಿಗಳು ಹಡಗಿನ ಹೊರಮೈಗೆ ಮ್ಯಾಗ್ನೆಟಿಕ್ ಸ್ಫೋಟಕ ಅಂಟಿಸಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಸ್ಫೋಟದಿಂದ ಎಂಜಿನ್ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸಿಬ್ಬಂದಿಯ ಸಮಯೋಚಿತ ಕಾರ್ಯಾಚರಣೆಯಿಂದ ಅದನ್ನು ನಿಯಂತ್ರಿಸಲಾಗಿದೆ. ಆದರೆ ಹಡಗಿನ ಕಾರ್ಯಾಚರಣೆಗೆ ಅಡಚಣೆ ಉಂಟಾಗಿದೆ.

ಅಕ್ಟೋಬರ್ 29ರಂದು ಮತ್ತೊಂದು ಹಡಗಿನ ಮೇಲೂ ಇಂತಹುದೇ ದಾಳಿ ನಡೆದಿತ್ತು. ಎರಡೂ ಘಟನೆಗಳಲ್ಲಿ ಸಿಲುಕಿದ್ದ ಒಟ್ಟು 29 ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ.
ಭಾರತ ಸರ್ಕಾರ ಹಡಗು ನಿರ್ವಹಣಾ ಕಂಪನಿಗಳೊಂದಿಗೆ ಸಂಪರ್ಕದಲ್ಲಿದ್ದು, ನಾವಿಕರ ಸುರಕ್ಷತೆಯ ಮೇಲೆ ನಿಗಾ ಇರಿಸಿದೆ ಎಂದು ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ತಿಳಿಸಿದ್ದಾರೆ.














































































