ಹೊಸಪೇಟೆ: ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ ನೆಲ ಕಚ್ಚಲಿದೆ. ನಾವು 2023ರ ವಿಧಾನಸಭಾ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸೀಟುಗಳನ್ನು ಪಡೆದು ಮತ್ತೆ ಸರಕಾರ ರಚಿಸಲಿದ್ದೇವೆ ಎಂದು ಬಿಜೆಪಿ ಕರ್ನಾಟಕದ ಉಸ್ತುವಾರಿಗಳು ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಸಿಂಗ್ ವಿಶ್ಲೇಷಿಸಿದ್ದಾರೆ.
ಹೊಸಪೇಟೆಯಲ್ಲಿ ನಡೆಯುತ್ತಿರುವ ಬಿಜೆಪಿ ರಾಜ್ಯ ವಿಶೇಷ ಕಾರ್ಯಕಾರಿಣಿ ಸಭೆಯ ಸಂದರ್ಭದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಹುದ್ದೆಗಾಗಿ ಪೈಪೋಟಿ ಮುಂದುವರಿದಿದೆ. ಸಿದ್ದರಾಮಯ್ಯರ ಬದಲಿಗೆ ತಾವು ಮುಖ್ಯಮಂತ್ರಿ ಆಗಬೇಕೆಂದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಪ್ರಯತ್ನ ಮುಂದುವರಿಸಿದ್ದಾರೆ. ಆದರೆ, ದೇಶದೆಲ್ಲೆಡೆ ಮತ್ತು ಕರ್ನಾಟಕದಲ್ಲಿ ಜನರು ಕಾಂಗ್ರೆಸ್ ಮೇಲಿನ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ ಎಂದರು. ಕಾಂಗ್ರೆಸ್ ಗೊಂದಲದ ಪಕ್ಷ. ಕಾಂಗ್ರೆಸ್ಸೆಂದರೆ ಅದು ಷಡ್ಯಂತ್ರದ ಪಕ್ಷ ಎಂಬ ಚರಿತ್ರೆಯನ್ನು ಹೊಂದಿದೆ ಎಂದರು.
ದೇಶದ 4 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಏರಿದ ಬಳಿಕ ಕರ್ನಾಟಕದ ಕಾರ್ಯಕರ್ತರು ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಉತ್ಸುಕರಾಗಿದ್ದಾರೆ. ಕೇಂದ್ರದ ನರೇಂದ್ರ ಮೋದಿಯವರ ಸರಕಾರದ ಸಾಧನೆಗಳು ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜನಪರ ಮತ್ತು ಬಡವರ ಪರವಾದ ಕಾರ್ಯಕ್ರಮಗಳ ವಿವರವನ್ನು ಜನರಿಗೆ ತಲುಪಿಸಿ ಬಿಜೆಪಿಯನ್ನು ಗೆಲ್ಲಿಸಲು ಕಾರ್ಯಕರ್ತರು ಸಜ್ಜಾಗಿದ್ದಾರೆ ಎಂದು ನುಡಿದರು.
ವಿಜಯನಗರದಿಂದ ಪದಾಧಿಕಾರಿಗಳು ವಿಜಯದ ಸಂಕಲ್ಪದೊಂದಿಗೆ ಹಿಂತೆರಳಲಿದ್ದಾರೆ. ಬಿಜೆಪಿ 2023ರ ವಿಧಾನಸಭಾ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸೀಟುಗಳನ್ನು ಗೆದ್ದು ಅಧಿಕಾರಕ್ಕೆ ಏರುವ ವಿಶ್ವಾಸವಿದೆ ಎಂದರು.