ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿನ ವಿದ್ಯಮಾನಗಳ ನಡುವೆ ರಾಜ್ಯದ ಆಡಳಿತಾರೂಢ ಕಮಲ ಪಕ್ಷದ ಕಚೇರಿ ಇಂದು ಹೈ ವೋಲ್ಟೇಜ್ ವಿದ್ಯಮಾನಕ್ಕೆ ಸಾಕ್ಷಿಯಾಯಿತು.
ರಾಜ್ಯ ಬಿಜೆಪಿಯಲ್ಲಿ ನಾಯಕತ್ವದ ವಿರುದ್ದ ಬಂಡಾಯದ ಬಿರುಗಾಳಿ ಎದ್ದಿದ್ದು ಮುಖ್ಯಮಂತ್ರಿ ಬದಲಾವಣೆಗೆ ಒತ್ತಡ ಹೆಚ್ಚಾಗಿದೆ. ಹಲವು ಶಾಸಕರು ಬಿಎಸ್‌ವೈ ಹಾಗೂ ಅವರ ಕುಟುಂಬದ ನಡೆ ವಿರುದ್ದ ವರಿಷ್ಠರಿಗೆ ದೂರು ನೀಡಿದ್ದರು. ಜೊತೆಗೆ ಜಿಂದಾಲ್ ಭೂ ಚಕ್ರ ವಿಚಾರವೂ ಹಲವರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ವಿಚಾರದಲ್ಲಿ ಬಿಎಸ್‌ವೈ ಆಪ್ತರು ಹಾಗೂ ಅತೃಪ್ತರ ನಡುವಿನ ವಾಕ್ಪ್ರಹಾರ ಪಕ್ಷದ ವರಿಷ್ಠರನ್ನೂ ಗಲಿಬಿಲಿಗೊಳಿಸಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ನಾಯಕ ಅರುಣ್ ಸಿಂಗ್ ಬೆಂಗಳೂರಿಗೆ ದೌಡಾಯಿಸುವ ಮೂಲಕ ರಾಜಕೀಯ ವಿದ್ಯಮಾನಗಳಿಗೆ ರೋಚಕತೆ ತಂದುಕೊಟ್ಟಿದ್ದಾರೆ.
ಇಂದು ಸಂಜೆ ಬೆಂಗಳೂರಿಗೆ ಆಗಮಿಸಿದ ಅರುಣ್ ಸಿಂಗ್ ಅವರು ಬಿಜೆಪಿ ರಾಜ್ಯ ಕಚೇರಿಯಲ್ಲಿ ಸಚಿವರ ಸಬೆ ನಡೆಸಿ ಕುತೂಹಲದ ಕೇಂದ್ರಬಿಂದುವಾದರು. ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೂಡಾ ಉಪಸ್ಥಿತರಿದ್ದರು.
ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ್ ಸವದಿ, ಅಶ್ವತ್ಥನಾರಾಯಣ್, ಹಿರಿಯ ಸಚಿವರಾದ ಜಗದೀಶ್ ಶೆಟ್ಟರ್, ಎಸ್.ಆರ್.ಬೊಮ್ಮಾಯಿ, ಈಶ್ವರಪ್ಪ, ಮುರುಗೇಶ್ ನಿರಾಣಿ ಸಹಿತ ಬಿಎಸ್‌ವೈ ಸಂಪುಟ ಸಹೋದ್ಯೋಗಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು. ಬಂಡಾಯದ ಕಹಳೆ ಊದಿರುವ ಸಚಿವ ಯೋಗೇಶ್ವರ್ ಅವರು ಸಭೆ ಆರಂಭವಾಗಿ ಎಷ್ಟೇ ಹೊತ್ತಾದರೂ ಕಾಣಿಸಿಕೊಳ್ಳಲಿಲ್ಲ. ತಡವಾಗಿ ಆಗಮಿಸಿದ ಅವರು ಎಲ್ಲರ ಕುತೂಹಲದ ಕೇಂದ್ರ ಬಿಂದುವಾದರು. ತಾವು ವೈಯಕ್ತಿಕ ಕೆಲಸ ನಿಮಿತ್ತ ಹೈದರಾಬಾದ್‌ಗೆ ಹೋಗಿದ್ದಾಗಿ ಅವರು ಹೇಳಿದರು.
ಸುದೀರ್ಘ ಹೊತ್ತು ಅರುಣ್ ಸಿಂಗ್ ನೇತೃತ್ವದಲ್ಲಿ ನಡೆದ ಈ ಸಭೆ ಎಲ್ಲರ ಕೌತುಕದ ಕೇಂದ್ರ ಬಿಂದುವಾಗಿತ್ತು. ಈ ಸಭೆಯಲ್ಲಿ ಏನೇನು ಚರ್ಚೆ ನಡೆದಿದೆ ಎಂಬ ಕುತೂಹಲ ಕಚೇರಿ ಬಳಿ ಜಮಾಯಿಸಿದ್ದ ಬಿಜೆಪಿ ಕಾರ್ಯಕರ್ತರದ್ದಾಗಿತ್ತು.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅರುಣ್ ಸಿಂಗ್, ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದರು. ಕೋವಿಡ್ ನಿರ್ವಹಣೆ ಕುರಿತಂತೆ ಚರ್ಚಿಸಲಾಗಿದೆ ಎಂದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೂಡಾ ಇದೇ ರೀತಿ ಮಾಹಿತಿ ಹಂಚಿಕೊಂಡರಲ್ಲದೆ ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಬಿಎಸ್‌ವೈ ಬಗ್ಗೆ ಶಹಬ್ಬಾಸ್‌ಗಿರಿ..
ಇದಕ್ಕೂ ಮುನ್ನ ಕುಮಾರಕೃಪಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅರುಣ್ ಸಿಂಗ್, ರಾಜ್ಯ ಬಿಜೆಪಿಯಲ್ಲಿ ಯಾವುದೇ ರೀತಿಯ ಭಿನ್ನಮತ ಇಲ್ಲ ಎಂದರು. ಯಡಿಯೂರಪ್ಪ ಸರ್ಕಾರ ಚೆನ್ನಾಗಿ ಕೆಲಸ ಮಾಡುತ್ತಿದೆ ಎಂದ ಅವರು, ಶಾಸಕರು, ಸಚಿವರಿಗೆ ಅತೃಪ್ತಿ ಇದ್ದರೆ, ಏನಾದರೂ ಹೇಳುವುದಿದ್ದರೆ ನನ್ನಲೇ ಹೇಳಲಿ. ಮಾಧ್ಯಮಗಳ ಮುಂದೆ ಹೇಳಿಕೊಳ್ಳುವುದು ಬೇಡ ಎಂದು ತಾಕೀತು ಮಾಡಿದರು.
ಕೋವಿಡ್ ಸಂದರ್ಭದಲ್ಲಿ ಬಿಎಸ್‌ವೈ ಸರ್ಕಾರ ಉತ್ತಮ ಕೆಲಸ ಮಾಡಿದೆ. ಬಡ ಕುಟುಂಬಗಳಿಗೆ 1 ಲಕ್ಷ ರೂಪಾಯಿ ಪರಿಹಾರ ಘೋಷಿಸಿರುವುದೂ ಉತ್ತಮ ಕೆಲಸವಾಗಿದೆ ಎಂದು ಅರುಣ್ ಸಿಂಗ್ ಅವರು ಯಡಿಯೂರಪ್ಪ ಅವರ ಕಾರ್ಯವೈಖರಿಯನ್ನು ಸಮರ್ಥಿಸಿಕೊಂಡರು.