(ವರದಿ: ನವೀನ್)
ಮಂಗಳೂರು: ಆಧುನೀಕತೆಯ ಅಬ್ಬರದ ನಡುವೆ ಸಂಸ್ಕೃತಿ ಸೌರಭ ಮರೆಯಾಗಿದೆ ಎಂಬ ಅಪವಾದ ಸಹಜ. ಆದರೆ ಮಂಗಳೂರಿನ ಸನ್ನಿವೇಶವೊಂದು ಅದೆಲ್ಲದಕ್ಕೂ ಉತ್ತರ ಎಂಬಂತಿದೆ.
ಮುಗಿಲೆತ್ತರ ಹಾರಿದ ಆಕಾಶ ಬುಟ್ಟಿಗಳು, ಪರಿಸರವನ್ನೇ ನಸುನಗಿಸುವಂತೆ ಮಾಡಿದ ದೀಪಗಳ ವಯ್ಯಾರ, ವರ್ಣ ಚಿತ್ತಾರದ ರಂಗೋಳಿಯ ಅಲಂಕಾರ.. ಚೆಲುವೆಯರ ಸೌಂದರ್ಯ ಸೊಬಗು.. ಸಾಂಸ್ಕೃತಿಕ ಸೊಗಸಿಗೆ ಆಕರ್ಷಣೆ ತಂದ ಯುವಕರ ಉತ್ಸಾಹ.. ಇದೆಲ್ಲವನ್ನೂ ಕಂಡ ಗಣ್ಯರು ಮೂಕವಿಸ್ಮಿತ.
ವಿಜ್ಞಾನ-ತಂತ್ರಜ್ಞಾನ ಶಿಕ್ಷಣದ ನಡುವೆ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಮೌಲ್ಯವನ್ನು ತಿಳಿಹೇಳುವ ಮಂಗಳೂರಿನ ‘ಕರಾವಳಿ ಶಿಕ್ಷಣ ಸಂಸ್ಥೆಗಳು’ ಇಂಥದ್ದೊಂದು ಅನನ್ಯ ಆಚರಣೆಯ ಸನ್ನಿವೇಶಕ್ಕೆ ಸಾಕ್ಷಿಯಾದದ್ದು. ಈ ಕ್ಯಾಂಪಸ್ ತುಂಬೆಲ್ಲಾ ದೀಪಾವಳಿ ಕುರಿತು ಪೌರಾಣಿಕ ಮಹತ್ವ ಸಾರುವ, ಸಂಸ್ಕೃತಿ ಶ್ರೀಮಂತಿಕೆಯನ್ನು ಅನಾವರಣಗೊಳಿಸುವ ರಂಗೋಳಿಗಳು ನೋಡುಗರ ಚಿತ್ತ ಸೆಳೆದವು.
ಕಳೆದ ವರ್ಷ ಕೊರೋನಾ ಸೋಕಿನ ಭಯಾನಕ ಕರಿಛಾಯೆ ಆವರಿಸಿದ್ದರಿಂದ ಬೆಳಕಿನಹಬ್ಬವೂ ಅದ್ದೂರಿತನದಿಂದ ದೂರವಿತ್ತು. ಆದರೆ ಈ ಬಾರಿ ಕರಾವಳಿ ಕಾಲೇಜಿನಲ್ಲಿ ಶಿಕ್ಷಾರ್ಥಿಗಳು ಬೆಳಗಿಸಿದ ಬೆಳಕಿನ ಚಿತ್ತಾರವು ಬಾನೆತ್ತರ ಚಾಚಿತ್ತು. ಸುಡುಮದ್ದುಗಳ ಆರ್ಭಟ ಇಲ್ಲದಿದ್ದರೂ ಪರಿಸರ ಸ್ನೇಹಿ ಹಸುರು ಪಟಾಕಿಗಳು ಈ ವಿದ್ಯಾರ್ಥಿಗಳ ಅನನ್ಯ ದೀಪಾವಳಿ ವೈಭವಕ್ಕೆ ಆಕರ್ಷಣೆ ತುಂಬಿದವು.
ದೀಪಾವಳಿ ಹಬ್ಬದ ಆದ್ಯ ದಿನ ನರಕ ಚತುರ್ದಶಿಗೆ ಮುನ್ನಾ ದಿನವಾದ ಮಂಗಳವಾರ ಸಂಜೆ ಮಂಗಳೂರಿನ ಕೊಟ್ಟಾರ ಬಳಿಯ ಕರಾವಳಿ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್‌ನಲ್ಲಿ ಸಿರಿವಂತಿಕೆಯ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಕರಾವಳಿ ಇಂಜಿನಿಯರಿಂಗ್ ಕಾಲೇಜು, ಜಿ.ಆರ್ ಮೆಡಿಕಲ್ ಕಾಲೇಜು, ಕರಾವಳಿ ಫಾರ್ಮಸಿ ಕಾಲೇಜು, ಫ್ಯಾಷನ್ ಕೋರ್ಸ್ ಸಹಿತ ಕರಾವಳಿ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಈ ದೀಪಗಳ ಹಬ್ಬದ ಸಡಗರದಲ್ಲಿ ಮಿಂದೆದ್ದರು.
ಸಾಂಸ್ಕೃತಿಕ ಹಬ್ಬಕ್ಕೆ ಆಧುನಿಕತೆಯ ಟಚ್..
ವಿಶೇಷತೆಗಳಿಗೆ ಹೆಸರಾಗಿರುವ ‘ಕರಾವಳಿ’ಯ ಕ್ರಿಯಾಶೀಲ ಶಿಕ್ಷಣ ತಜ್ಞರಲ್ಲೊಬ್ಬರಾದ ಎಸ್.ಗಣೇಶ್ ರಾವ್ ಅವರು ದೀಪಾಳಿ ಸಂದರ್ಭದಲ್ಲಿ ಈ ಸುಂದರ ಸಾಂಸ್ಕೃತಿಕ ಲೋಕವನ್ನು ಅನಾವರಣ ಮಾಡಿಸಿದ್ದರು. ತಮ್ಮ ಸಂಸ್ಥೆಯಲ್ಲಿ ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು ಅವರು ಹಬ್ಬ ಸಂಭ್ರಮದಿಂದ ದೂರ ಉಳಿಯಬಾರದೆಂಬ ಉದ್ದೇಶದಿಂದ ಕಾಲೇಜು ಆವರಣದಲ್ಲಿ ಈ ಸಡರದ ಸನ್ನಿವೇಶವನ್ನು ಕರಾವಳಿ ಕಾಲೇಜು ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಗಣೇಶ್ ರಾವ್ ಹಾಗೂ ನಿರ್ದೇಶಕಿ ಲತಾ ಜಿ.ರಾವ್ ಅವರು ಸೃಷ್ಟಿಸಿದ್ದರು.
ಕ್ಯಾಂಪಸ್ ತುಂಬೆಲ್ಲಾ ರಂಗೋಳಿಯ ಚಿತ್ತಾರ.. ಮುಗಿಲರತ್ತರ ಚಾಚಿದ ಕಟ್ಟಡಳಿಗೂ ದೀಪಗಳ ಅಲಂಕಾರ.. ಅಲ್ಲಲ್ಲಿ ವಿದ್ಯಾರ್ಥಿಗಳೇ ಬೆಳಗಿಸಿದ ಜ್ಯೋತಿ ವಯ್ಯಾರವು ಸಿರಿವಂತಿಕೆಯ ಹಬ್ಬವಾದ ಈ ದೀಪಾವಳಿಯ ಆಕರ್ಷಣೆಯನ್ನು ನೂರ್ಮಡಿಗೊಳಿಸಿತು.
ವಿವಿಧ ಮನೋರಂಜನಾ ಕಾರ್ಯಕ್ರಮಗಳು ಗಮನಸೆಳೆದವು. ಫ್ಯಾಷನ್ ಪ್ರಿಯರ ಪಾಲಿಗೆ ಚೆಲುವೆಯರ ಫ್ಯಾಷನ್ ಪ್ರಾತ್ಯಕ್ಷಿಕೆಯೂ ಕುತೂಹಲ ಎಂಬಂತಿತ್ತು. ನೆರೆದಿದ್ದ ಗಣ್ಯಾತಿಗಣ್ಯರು ಈ ವಾತಾವರಣದ ಅಚ್ಚರಿಗೆ ಸಾಕ್ಷಿಯಾದರು.
ಈ ಸಮಾರಂಭ ಕುರಿತಂತೆ ಮಾಹಿತಿ ಹಂಚಿಕೊಂಡ ಕರಾವಳಿ ಕಾಲೇಜು ಸಮೂಹದ ಸಂಸ್ಥಾಪಕಾಧ್ಯಕ್ಷ ಎಸ್.ಗಣೇಶ್ ರಾವ್, ತಮ್ಮ ಶಿಕ್ಷಣ ಸಂಂಸ್ಥೆಯಲ್ಲಿ ಕಲಿಯುವ ಯಾವುದೇ ವಿದ್ಯಾರ್ಥಿಯೂ ಹಬ್ಬದ ಸಂಭ್ರಮದಿಂದ ದೂರ ಉಳಿಯಬಾರದು, ಹಾಗೂ ಅವರು ಸಂಸ್ಕೃತಿ ಸೊಬಗನ್ನು ಮರೆಯಬಾರದೆಂಬ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಿದ್ದಾಗಿ ತಿಳಿಸಿದರು.
ನಾಡನ್ನು ಆವರಿಸಿರುವ ಕೊರೋನಾ ಛಾಯೆ ದೂರವಾಗಲಿ ಎಂದು ದೇವರನ್ನು ಕೋರುವ ಭಕ್ತಿ ಕೈಂಕರ್ಯಕ್ಕೂ ಈ ‘ಕರಾವಳಿ ದೀಪಾವಳಿ’ ವೇದಿಕೆಯಾದದ್ದು ವಿಶೇಷ.