ಬೆಂಗಳೂರು: ಕೊರೊನಾ ವೈರಸ್ನ ಜೆಎನ್1 ರೂಪಾಂತರಿಯಿಂದಾಗಿ ವೈರಾಣು ಹಾವಳಿ ಸೃಷ್ಟಿಯಾಗಿದೆ ಎಂಬ ಆತಂಕ ಹರಡಿದ್ದು 60 ವರ್ಷ ಮೇಲ್ಪಟ್ಟವರು ಉಸಿರಾಟ ತೊಂದರೆ ಅನುಭವಿಸುವವರು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವವರು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿರುವ ಸರ್ಕಾರ ಇಂದು ಮಾರ್ಗಸೂಚಿ ಪ್ರಕಟಿಸಿದೆ.
ಸೋಂಕು ಹರಡುವಿಕೆ ತೀವ್ರಗೊಳ್ಳುವ ಆತಂಕದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಹೊರರಾಜ್ಯಗಳಿಗೆ ಹೊಂದಿಕೊಂಡ ಗಡಿ ಭಾಗದಲ್ಲಿ ತಪಾಸಣೆ ಹೆಚ್ಚಳ ಮಾಡುವ ಜೊತೆಗೆ, ಕೋವಿಡ್ ಪರೀಕ್ಷೆ ಹೆಚ್ಚಿಸಸಲು ಸೂಚನೆ ನೀಡಲಾಗಿದೆ.
ಕೇರಳ, ತಮಿಳುನಾಡು ರಾಜ್ಯಗಳ ಗಡಿ ಭಾಗದಲ್ಲಿ ತಪಾಸಣೆ ಹೆಚ್ಚಳಕ್ಕೆ ಆದೇಶಿಸಲಾಗಿದ್ದು, ಕೊವಿಡ್ ನಿರ್ಬಂಧ ಅವಶ್ಯಕತೆ ಇಲ್ಲ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.
ಗಡಿ ಜಿಲ್ಲೆಗಳ ಕೋವಿಡ್ ಪರೀಕ್ಷಾ ವರದಿಯನ್ನು ಆರೋಗ್ಯ ಇಲಾಖೆಗೆ ಸಲ್ಲಿಸಲು ಜಿಲ್ಲಾಡಳಿತಗಳಿಗೆ ಸೂಚನೆ ನೀಡಲಾಗಿದ್ದು, ಶ್ವಾಸಕೋಶ ತೊಂದರೆ, ಉಸಿರಾಟದ ಸಮಸ್ಯೆ ಇರುವವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು, ರೋಗ ಲಕ್ಷಣ ಇರುವವರನ್ನು ಕೊವಿಡ್ ಪರಿಶೀಲನೆಗೆ ಒಳಪಡಿಸಬೇಕು. ಆಸ್ಪತ್ರೆಗಳಲ್ಲಿ ಪ್ರತ್ಯೇಕ ಕೊಠಡಿ ಸ್ಥಾಪನೆ ಮಾಡಬೇಕೆಂದು ಸೂಚಿಸಲಾಗಿದ್ದು, ಡಿ.3 ಮತ್ತು 4ನೇ ವಾರದಲ್ಲಿ ಮಾಕ್ ಡ್ರಿಲ್ ಪರಿಪೂರ್ಣಗೊಳಿಸಲು ಸೂಚಿಸಲಾಗಿದೆ.
























































