ಬೆಂಗಳೂರಿನಲ್ಲಿ ಭುಗಿಲೆದ್ದ ಆಶಾ ಕಾರ್ಯಕರ್ತೆಯರ ಆಕ್ರೋಶ.. ಸಮಸ್ಯೆ ಬಗೆಹರಿಯುವವರೆಗೂ ಹೋರಾಟಕ್ಕೆ ನಿರ್ಧಾರ.. ಸರ್ಕಾರಕ್ಕೆ ಸವಾಲಾದ ‘ಆಶಾ ಆಕ್ರೋಶ..’
ಬೆಂಗಳೂರು: ರಾಜಧಾನಿ ಮತ್ತೊಮ್ಮೆ ಆಶಾ ಕಾರ್ಯಕರ್ತೆಯರ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಬಿಬಿಎಂಪಿ ವ್ಯಾಪ್ತಿಯ ಹಾಗೂ ನಗರ ವಲಯದಲ್ಲ್ಲಿ ಕಾರ್ಯನಿರತರಾಗಿರುವ ಆಶಾ ಕಾರ್ಯಕರ್ತೆಯರ ಬೃಹತ್ ಹೋರಾಟವು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿತು.
ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್‌ಗೆ ಸಂಯೋಜಿತಗೊoಡಿರುವ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು. ದೈನಂದಿನ ಸಮಸ್ಯೆಗಳ ಕುರಿತು ಹಾಗೂ ಮುಖ್ಯವಾಗಿ ಪ್ರಸಕ್ತ ಸಮೀಕ್ಷೆ ನಡೆಸಲು ಮೊಬೈಲ್/ಟ್ಯಾಬ್ ಜೊತೆ ಡಾಟಾ ಒದಗಿಸಬೇಕೆಂದು ಹಾಗೂ ಆಶಾ ಕಾರ್ಯಕರ್ತೆಯರಲ್ಲಿ ಯಾರಿಗೆ ಮೊಬೈಲ್/ಟ್ಯಾಬ್ ಬಳಸಲು ಆಗುವುದಿಲ್ಲವೊ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು, ಆಶಾ ಕಾರ್ಯಕರ್ತೆಯರಿಗೆ ಈ-ಸಮೀಕ್ಷೆಗೆ ಸೂಕ್ತ ಸಂಭಾವನೆ ನಿಗದಿ ಮಾಡಲು ಆಗ್ರಹಿಸಿ ಈ ಹೋರಾಟ ನಡೆಯಿತು.
ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಕಾ.ರಮಾ ಟಿ.ಸಿ, ಅವರು ಮಾತನಾಡುತ್ತಾ, ಆಶಾ ಕಾರ್ಯಕರ್ತೆಯರು ಈಗಾಗಲೇ ಕೊರೋನಾ ಮಾಹಾಮಾರಿಯನ್ನು ಹಿಮೆಟ್ಟಿಸಲು ಪ್ರಮುಖ ಪಾತ್ರ ವಹಿಸಿದ್ದಾರೆ, ಅಲ್ಲದೇ ಹಗಲು ರಾತ್ರಿಯ ಚಿಂತೆಯಿಲ್ಲದೇ, ಜನರ ಆರೋಗ್ಯದ ಜವಾಬ್ದಾರಿಯನ್ನು ಹೊತ್ತು ದಣಿಯುತ್ತಿದ್ದಾರೆ. ಇದರ ಮೇಲೆ ಇವರಿಗೆ ಸರಣಿಯಾಗಿ ಸಮೀಕ್ಷೆಗಳನ್ನು ಆದೇಶಿಸಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ, ಈ ಸಮೀಕ್ಷೆಯ ಉದ್ದೇಶ, ಇವರು ಕೇಳುವ ಪ್ರಶ್ನೆಗಳಿಗೆ ಆಧಾರ ಅಥವಾ ಕಾರಣಗಳನ್ನು ಆಶಾಗಳಿಗೆ ನಿರ್ದೇಶಿಸಿರುವುದಿಲ್ಲ, ಅಲ್ಲದೇ ಈ ಸಮೀಕಗೆ ಕನಿಷ್ಠ ಸಂಭಾವನೆಯೂ ನಿಗದಿ ಮಾಡಿಲ್ಲ ಎಂದು ತಮ್ಮ ಸಮಸ್ಯೆಗಳತ್ತ ಬೆಳಕು ಚೆಲ್ಲಿದರು.
ಈಗಾಗಲೇ ಆರ್ಥಿಕ ಬಿಕಟ್ಟಿನ ಪರಿಸ್ಥಿತಿಯ ನಡುವೆಯೂ ಆರೋಗ್ಯ ಸೇವಕರಾಗಿ ಆಶಾ ಕಾರ್ಯಕರ್ತೆಯರು ದುಡಿಯುತ್ತಿರುವರು, ಇವರಿಗೆ ಹಲವರಲ್ಲಿ ತಿಂಗಳುಗಳಿoದ ಸಂಬಳವಾಗಲಿ, ಅಥವಾ ಮಾಡಿರುವ ಕೆಲಸಕ್ಕೆ ವೇತನವಾಗಲಿ ದೊರೆತಿಲ್ಲವಾದರೂ ನಿಸ್ವಾರ್ಥತೆಯಿಂದ ದುಡಿಯುತ್ತಿದ್ದಾರೆ. ಇವೆಲ್ಲವನ್ನೂ ತಿಳಿದಿರುವ ಸರ್ಕಾರ, ಹಾಗೂ ಅಥವಾ ಸಂಬoಧಪಟ್ಟ ಅಧಿಕಾರಿಗಳು ಗಮನ ಕೊಡದಿರುವುದು ಆಶಾ ಕಾರ್ಯಕರ್ತೆಯರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರ ಹಾಗೂ ಸಂಬoಧಪಟ್ಟ ಅಧಿಕಾರಿಗಳು ಈ ಸಮಸ್ಯೆಗಳಿಗೆ ಪರಿಹಾರ ಕೊಡುವವರೆಗೂ ಈ-ಸಮೀಕ್ಷೆ ಮಾಡದಿರಲು ಆಶಾ ಕಾರ್ಯಕರ್ತೆಯರು ನಿಶ್ಚಯಿಸಿದ್ದಾರೆ ಎಂದರು.
ಪಿ.ಎಸ್. ಶಣ್ಮುಗಂ, ಜಿಲ್ಲಾ ಅಧ್ಯಕ್ಷರು, ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ಜಿಲ್ಲಾ ಅಧ್ಯಕ್ಷ ಪಿ.ಎಸ್. ಶಣ್ಮುಗಂ ಮಾತನಾಡಿ, ಬೆಲೆ ಏರಿಕೆಯಿಂದ ಹಲವಾರು ದಿನಗೂಲಿ ನೌಕರರು ಜನಸಮಾನ್ಯರು ಕೆಲಸ ಕಳೆದುಕೊಂಡಿದ್ದಾರೆ. ಅಡುಗೆ ಅನಿಲ, ಪೆಟ್ರೋಲ್, ಡೀಸಲ್ ಸೇರಿದಂತೆ ಬಹುತೇಕ ಅಗತದಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಬಡ ಜನರು ತತ್ತರಿಸುತ್ತಿದ್ದಾರೆ. ಆದರೆ ಒಂದೆಡೆ, ಶ್ರೀಮಂತ ಬಂಡವಾಳಶಾಹಿಗಳಿಗೆ ಟ್ಯಾಕ್ಸ್ ಹಾಲಿಡೀಸ್, ಸಾಲ ಮನ್ನಾ ಮಾಡುತ್ತಾ, ಖಾಸಕರಣ ನೀತಿಗಳ ಮೂಲಕ ಅವರಿಗೆ ಸವಲತ್ತುಗಳನ್ನು ಕೊಡುತ್ತಿದ್ದಾರೆ. ಇನ್ನೊಂದೆಡೆ ಬಡ ಜನರ ರಕ್ತ ಹೀರುತ್ತಿದ್ದಾರೆ. ಕಳೆದ ಒಂದು ವರ್ಷದಲ್ಲಿ ಪದೇ ಪದೇ ಆಶಾ ಕಾರ್ಯಕರ್ತೆಯರನ್ನು ಬೀದಿಗೆ ಇಳಿಸುತ್ತಿದ್ದಾರೆ, ಇದು ಅತ್ಯಂತ ಖಂಡನೀಯ ಎಂದರು.
ಇದೇ ವೇಳೆ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ರಾಜ್ಯ ನೋಡಲ್ ಅಧಿಕಾರಿ ಪ್ರಭು ಗೌಡರವರಿಗೆ ಕಾರ್ಮಿಕ ಮುಖಂಡರು ತಮ್ಮ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿದರು. ತಮ್ಮ ಬಹುಕಾಲದ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿದರು.