ಬೆಂಗಳೂರು: ಸುದೀರ್ಘ ಕಾಲದ ನಂತರ ರಾಜ್ಯ ಸರ್ಕಾರದ ವಿರುದ್ಧದ ಪ್ರಕರಣವೊಂದು ತಾರ್ಕಿಕ ಅಂತ್ಯ ತಲುಪಿ, ಭಾರೀ ಅಕ್ರಮಕ್ಕೆ ಬ್ರೇಕ್ ಬಿದ್ದಿದೆ. ಇಂತಹಾ ದಿಟ್ಟ ಕ್ರಮಕ್ಕೆ ರಾಜ್ಯ ಹೈಕೋರ್ಟ್ ವಿದ್ಯಮಾನ ಸಾಕ್ಷಿಯಾಗಿದ್ದು, ನ್ಯಾಯಾಂಗದ ಬಗ್ಗೆ ಜನರಿಗಿರುವ ಗೌರವ ಮತ್ತಷ್ಟು ಹೆಚ್ಚಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಜಿಂದಾಲ್ ಕಂಪನಿಗೆ ರಾಜ್ಯ ಬಿಜೆಪಿ ಸರ್ಕಾರ ಬಹುಕೋಟಿ ರೂಪಾಯಿ ಮೌಲ್ಯದ ಜಮೀನನ್ನು ಅಕ್ರಮವಾಗಿ ಹಂಚಿಕೆ ಮಾಡಲು ಮುಂದಾಗಿದ್ದನ್ನು ಪ್ರಶ್ನಿಸಿ ‘ಸಿಟಿಜನ್ ರೈಟ್ಸ್ ಫೌಂಡೇಷನ್’ ಮುಖ್ಯಸ್ಥ ಕೆ.ಎ.ಪಾಲ್ ಹಾಗೂ ಹಿರಿಯ ವಕೀಲರಾದ ಎಸ್.ದೊರೆರಾಜು ಅವರು ಸುದೀರ್ಘ ಕಾನೂನು ಹೋರಾಟ ನಡೆಸಿದ್ದಾರೆ. ವಿವಾದದಿಂದ ತೀವ್ರ ಮುಜುಗರಕ್ಕೊಳಗಾಗಿದ್ದ ಸರ್ಕಾರ, ಈ ಭೂ ಹಂಚಿಕೆ ಕ್ರಮದಿಂದ ಹಿಂದೆ ಸರಿದಿದ್ದಾಗಿ ಹೈಕೋರ್ಟ್‌ಗೆ ತಿಳಿಸಿದ್ದು, ಈ ಹೇಳಿಕೆಯನ್ನಾಧರಿಸಿ ಮುಖ್ಯ ನ್ಯಾಯಮೂರ್ತಿಗಳನ್ನೊಳಗೊಂಡ ಪೀಠವು ವಿವಾದವನ್ನು ಇತ್ಯರ್ಥಗೊಳಿಸಿದೆ.
ಏನಿದು ಪ್ರಕರಣ..?
ಕೊರೋನಾ ಸಂಕಟ ಕಾಲದಲ್ಲಿ ಖಾಸಗಿ ಕಂಪನಿ ಜಿಂದಾಲ್‌ಗೆ ತರಾತುರಿಯಲ್ಲಿ 3367 ಎಕರೆ ಜಮೀನು ಮಂಜೂರಾತಿ ನಿರ್ಧಾರವನ್ನು ಹಿಂದಿನ ಬಿಎಸ್‌ವೈ ಸರ್ಕಾರ ಕೈಗೊಂಡಿತ್ತು. ಹಿಂದೆ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಆಗ ಬಳ್ಳಾರಿ ಜಿಲ್ಲೆ ವ್ಯಾಪ್ತಿಯಲ್ಲಿ ಜಿಂದಾಲ್‌ಗೆ ಜಮೀನು ಮಂಜೂರು ಮಾಡುವ ಪ್ರಕ್ರಿಯೆ ಆರಂಭವಾಗಿತ್ತು. ಆಗ ಇದಕ್ಕೆ ವಿರೋಧ ವ್ಯಕ್ತಪಡಿಸಿ ಬಿಜೆಪಿ ವತಿಯಿಂದ ಭಾರೀ ಪ್ರತಿಭಟನೆ ನಡೆದಿತ್ತು. ಆ ಸರ್ಕಾರ ಪತನಗೊಂಡು ಬಿಎಸ್‌ವೈ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಯಡಿಯೂರಪ್ಪ ಅವರ ಮುಂದಾಳುತ್ವದಲ್ಲಿ ಅದೇ ಜಿಂದಾಲ್ ಕಂಪನಿಗೆ ಸಂಡೂರು ಬಳಿ 3667 ಎಕರೆ ಜಮೀನು ನೀಡುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಆರೋಪಿಸಿ ಸಾಮಾಜಿಕ ಹೋರಾಟಗಾರ ಕೆ.ಎ.ಪಾಲ್ ಅವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಧಾವೆ ಹೂಡಿದ್ದರು.
ಸರ್ಕಾರದ ನಡೆಯನ್ನು ಪ್ರಶ್ನಿಸಿ ಕೆ.ಪಾಲ್ ಸಲ್ಲಿಸಿದ್ದ ಈ ಪಿಐಎಲ್ ಜೊತೆಗೆ ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ಸಹಿತ ಸಂಪುಟದ 32 ಸಚಿವರಿಗೆ ಲೀಗಲ್ ನೋಟಿಸ್ ನೀಡಿದ್ದ ಕಾನೂನು ಪ್ರಕ್ರಿಯೆಯೂ ರಾಜಕೀಯ ಇತಿಹಾಸದಲ್ಲೇ ಮೊದಲೆಂಬಂತೆ ಸಂಚಲನ ಸೃಷ್ಟಿಸಿತ್ತು.
ಇದೇ ವೇಳೆ, ಕೆಲವು ಸಚಿವರು ಹಾಗೂ ಶಾಸಕರ ವಿರೋಧವಿದ್ದರೂ, ಕಡಿಮೆ ದರದಲ್ಲಿ ನಿಯಮ ಬಾಹಿರವಾಗಿ ಜಿಂದಾಲ್ ಕಂಪನಿಗೆ ಜಮೀನು ಮಂಜೂರು ಮಾಡಲಾಗಿದೆ ಎಂದು ಈ ದೂರಿನಲ್ಲಿ ಕೋರ್ಟ್ ಗಮನಸೆಳೆದಿರುವ ಅರ್ಜಿದಾರರು, ಇದು ಬಹುಕೋಟಿ ಹಗರಣವಾಗಿದ್ದು ಕಿಕ್‌ಬ್ಯಾಕ್ ಸಂದಾಯದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.
ಅರ್ಜಿದಾರರ ಪರವಾಗಿ ವಾದಿಸಿದ ಮಾಜಿ ಸರ್ಕಾರಿ ಅಭಿಯೋಜಕ ಎಸ್.ದೊರೆರಾಜು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರವು ದಾಖಲೆಗಳನ್ನು ನೀಡಲು ಹಿಂದೇಟು ನೀಡುತ್ತಿದೆ ಎಂದು ಕೋರ್ಟ್ ಗಮನಕ್ಕೆ ತಂದಿದ್ದರು.
ಈ ಧಾವೆಯ ಬೆನ್ನಲ್ಲೇ ಯಡಿಯೂರಪ್ಪ ಅವರು ಸಿಎಂ ಸ್ಥಾನ ತ್ಯಜಿಸಿದ್ದರು. ಅನಂತರ ಬಸವರಾಜ್ ಬೊಮ್ಮಾಯಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದರೂ ಸದರಿ ಧಾವೆಗೆ ಸಂಬಂಧಿಸಿದಂತೆ ಸರ್ಕಾರದ ಕಡೆಯಿಂದ ಆಕ್ಷೇಪಣೆ ಸಲ್ಲಿಸಿರಲಿಲ್ಲ. ಹಿಂದಿನ ವಿಚಾರಣೆ ವೇಳೆ, ಸರ್ಕಾರದ ಈ ನಡೆ ಬಗ್ಗೆ ಅಸಮಾಧನ ವ್ಯಕ್ತಪಡಿಸಿದ್ದ ವಿಭಾಗೀಯ ಪೀಠವು ಜಮೀನು ಹಂಚಿಕೆ ಪ್ರಕ್ರಿಯೆ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿತ್ತು.
ಸೋಮವಾರ ಈ ಪ್ರಕರಣ ಮತ್ತೆ ವಿಚಾರಣೆಗೆ ಬಂದ ಸಂದರ್ಭದಲ್ಲಿ, ಸರ್ಕಾರವು ವಕೀಲರ ಮೂಲಕ ಪತ್ರವನ್ನು ನೀಡಿದ್ದು, ಹಿಂದಿನ ಯಡಿಯೂರಪ್ಪ ಅವರ ಸರ್ಕಾರ ಕೈಗೊಂಡ ತೀರ್ಮಾನವನ್ನು ವಾಪಸ್ ಪಡೆದಿರುವುದಾಗಿ ತಿಳಿಸಿದೆ. ಇದನ್ನು ಪರಿಗಣಿಸಿದ ಮುಖ್ಯನ್ಯಾಯಮೂರ್ತಿ ರಿತು ರಾಜ್ ಆವಾಸ್ತಿ ಅವರನ್ನೊಳಗೊಂಡ ವಿಭಾಗೀಯ ಪೀಠವು ಪಿಐಎಲ್‌ನ್ನು ಇತ್ಯರ್ಥಪಡಿಸಿದೆ.