ಬೆಂಗಳೂರು: ಮಾಜಿ ಸಚಿವ ಬಿ. ನಾಗೇಂದ್ರ, ಉದ್ಯಮಿ ಗೌತಮ್ ಅದಾನಿ ಹಾಗೂ ಲಾಲ್ಬಾಗ್ ಭೂಮಿ ಬಳಕೆ ವಿಚಾರವಾಗಿ ಬಿಜೆಪಿ-ಜೆಡಿಎಸ್ ಸದಸ್ಯರು ವಿಧಾನಸಭೆಯಲ್ಲಿ ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದರು.

ವಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಸದನದ ಬಾವಿಗಿಳಿದ ಪ್ರತಿಪಕ್ಷ ಸದಸ್ಯರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ದಲಿತ ಕಲ್ಯಾಣಕ್ಕೆ ಮೀಸಲಾದ ಹಣದ ಅಕ್ರಮ ಬಳಕೆ ಕುರಿತು ಪ್ರಶ್ನಿಸಿದ ಬಿಜೆಪಿ, ಹಣ ಎಲ್ಲಿ ಹೋಯಿತು ಎಂಬುದಕ್ಕೆ ಸರ್ಕಾರ ಉತ್ತರಿಸಬೇಕು ಎಂದು ಒತ್ತಾಯಿಸಿತು.
ಇದೇ ವೇಳೆ, ಅದಾನಿ ವಿಚಾರದಲ್ಲಿ ಕಾಂಗ್ರೆಸ್ ದ್ವಂದ್ವ ನೀತಿ ಅನುಸರಿಸುತ್ತಿದೆ ಎಂದು ಬಿಜೆಪಿ ಆರೋಪಿಸಿತು. “ರಾಹುಲ್ ಗಾಂಧಿ ವೇದಿಕೆ ಸಿಕ್ಕಾಗಲೆಲ್ಲ ಅದಾನಿ ವಿರುದ್ಧ ಮಾತನಾಡುತ್ತಾರೆ. ಆದರೆ ಕರ್ನಾಟಕದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಿವಾಸಕ್ಕೆ ಅದಾನಿ ಭೇಟಿ ನೀಡುತ್ತಾರೆ. ದೆಹಲಿಯಲ್ಲಿ ಮಾತು ಬೇರೆ, ಕರ್ನಾಟಕದಲ್ಲಿ ನಡೆ ಬೇರೆ” ಎಂದು ಟೀಕಿಸಿತು.
ಲಾಲ್ಬಾಗ್ ಭೂಮಿ ಬಳಕೆಯ ಸರ್ಕಾರದ ಪ್ರಸ್ತಾವವನ್ನೂ ಬಿಜೆಪಿ ವಿರೋಧಿಸಿತು. ಕರ್ನಾಟಕ ಉದ್ಯಾನವನಗಳ ಸಂರಕ್ಷಣಾ ಕಾಯ್ದೆಗೆ ತಿದ್ದುಪಡಿ ಮೂಲಕ ಬೆಂಗಳೂರಿನ ಪಾರ್ಕ್ ಮತ್ತು ಉದ್ಯಾನಗಳ ಶೇ.5ರಷ್ಟು ಭೂಮಿಯನ್ನು ಸಾರ್ವಜನಿಕ ಮೂಲಸೌಕರ್ಯ ಯೋಜನೆಗಳಿಗೆ ಬಳಸಲು ಅವಕಾಶ ಕಲ್ಪಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿತು.
“ಸರ್ಕಾರದ ಕಣ್ಣು ಲಾಲ್ಬಾಗ್ನ ಸುಮಾರು 10 ಎಕರೆ ಭೂಮಿಯ ಮೇಲಿದೆ. ಇದರಿಂದ ಬೆಂಗಳೂರಿನ ಉಸಿರಿಗೆ ಉರುಳು ಹಾಕಲಾಗುತ್ತಿದೆ” ಎಂದು ಬಿಜೆಪಿ ಆರೋಪಿಸಿತು.
ರಾಹುಲ್ ಗಾಂಧಿ ವೇದಿಕೆ ಸಿಕ್ಕಾಗಲೆಲ್ಲಾ ಅದಾನಿ ಅವರನ್ನು ಟೀಕಿಸುತ್ತಾರೆ. ಆದರೆ ಅವರದೇ ಪಕ್ಷದ ನಾಯಕ, ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮನೆಗೆ ಅದಾನಿ ಬರುತ್ತಾರೆ!
ದೆಹಲಿ ಮಾತು ಬೇರೆ, ಕರ್ನಾಟಕದ ನಡೆ ಬೇರೆ!
ಒಂದೆಡೆ ಅದಾನಿ ವಿರುದ್ಧ ಭಾಷಣ, ಮತ್ತೊಂದೆಡೆ ಅದಾನಿಯೊಂದಿಗೆ ರಹಸ್ಯ ಮಾತುಕತೆ – ಇದು ಕಾಂಗ್ರೆಸ್ನ ‘ಡಬಲ್… pic.twitter.com/iAmFM9Mkgz
— R. Ashoka (@RAshokaBJP) August 24, 2026
ಪ್ರಸ್ತಾವಿತ ಸುರಂಗ ಮಾರ್ಗ ಯೋಜನೆಗೂ ವಿರೋಧ ವ್ಯಕ್ತಪಡಿಸಿದ ಪ್ರತಿಪಕ್ಷ, ನಗರದ ಹಸಿರು ಪ್ರದೇಶಗಳನ್ನು ರಕ್ಷಿಸುವಂತೆ ಆಗ್ರಹಿಸಿತು. ಪ್ರತಿಭಟನೆಯ ನಡುವೆಯೇ ಸ್ಪೀಕರ್ ಜಿ.ಎಸ್. ಪಾಟೀಲ್ ಕಲಾಪ ಮುಂದುವರಿಸಿದರು.







































































