ಬೆಂಗಳೂರು: ಕರಾವಳಿ ಸಿನಿಮಾ ಲೋಕದಲ್ಲೀಗ ಭೋಜರಾಜ್ ಅವರದ್ದೇ ಸುದ್ದಿ. ಅದರಲ್ಲೂ ಕೋವಿಡ್‌ನಿಂದಾಗಿ ಸುಸ್ತಾಗಿರುವ ಸಿನಿಮಾ ಲೋಕಕ್ಕೆ ಚೈತನ್ಯ ನೀಡು ವೈದ್ಯರ ರೂಪದಲ್ಲಿ ತಂಡವೊಂದು ಬರುತ್ತಿರುವುದೇ ಕುತೂಹಲಕಾರಿ ಸಂಗತಿ.
ಕೋಸ್ಟಲ್‌ವುಡ್‌ನ ಕಾಮಿಡಿ ಸ್ಟಾರ್ ಆಗಿರುವ ಬೋಜರಾಜ್ ಅವರೇ ಇದೀಗ ಕುತೂಹಲದ ಕೇಂದ್ರಬಿಂದು. ‘ಬಣ್ಣ ಬಣ್ಣದ ಲೋಕ’ದ ಚತುರ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ ಅವರು ಸುಮಾರು ಎರಡು ವರ್ಷಗಳ ಸುಧೀರ್ಘ ಪ್ರಯತ್ನ ಮೂಲಕ ತುಳು ಚಿತ್ರರಂಗದ ಇತಿಹಾಸದಲ್ಲೇ ಅದ್ಧೂರಿ ಸಿನಿಮಾವನ್ನು ಮಾಡಿದ್ದಾರೆ.
‘ಭೋಜರಾಜ್ MBBS’ ಹೆಸರಿನ ಈ ಸಿನಿಮಾ ಹಲವು ವೈಶಿಷ್ಟ್ಯಗಳನ್ನು ಹೊತ್ತು ತೆರೆಯ ಮೇಲೆ ಬರಲಿದೆ. ಚಿತ್ರರಂಗದ ಗಣ್ಯರ ವೈರುದ್ಯದ ಮಜಲಿನಲ್ಲಿ ಸಾಂಗತ್ಯದ ಸಾಂಗ್ ಹೆಣೆದಿರುವ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ, ಭೋಜರಾಜ್ ಮೋಡಿಯ ಜೊತೆಗೆ ಕೊಡಿಯಲ್‌ಬೈಲ್-ಕಾಪಿಕಾಡ್ ಟೀಮ್‌ಗಳನ್ನು ಒಂದಾಗಿಸಿ ಈ ಸಿನಿಮಾದಲ್ಲಿ ನಟಿಸುವಂತೆ ಮಾಡಿರುವುದೇ ತುಳುನಾಡಿನಲ್ಲೊಂದು ಹೊಸತನಕ್ಕೆ ಮುನ್ನುಡಿಯಾಗಿದೆ.
ಈ ನಡುವೆ, ‘ಭೋಜರಾಜ್ MBBS’ ಸಿನಿಮಾ ವಿಶೇಷತೆಯಲ್ಲಿನ ವಿಶೇಷತೆ ಏನು? ಈ ಚಿತ್ರವನ್ನು ಯಾಕೆ ನೋಡಬೇಕು ಎಂಬ ಕುತೂಹಲಕಾರಿ ಪ್ರಶ್ನೆಗಳೂ ಹರಿದಾಡಿವೆ. ಈ ಪ್ರಶ್ನೆಗಳಿಗೆ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ ಅವರು ಐದು ಕಾರಣಗಳನ್ನು ವಿವರಿಸಿದ್ದಾರೆ.
- ತುಳು ನಾಟಕ ಮತ್ತು ಚಿತ್ರ ರಂಗದ ಹೆಸರಾಂತ ಹಾಸ್ಯ ನಟ ಬೋಜರಾಜ್ ವಾಮಂಜೂರು ಮೊದಲ ಬಾರಿಗೆ ನಾಯಕ ನಟನಾಗಿ ಕಾಣಿಸಿಕೊಂಡಿರುವ ಈ ಚಿತ್ರದ ಟೈಟಲ್ ತುಂಬಾನೇ ಆಕರ್ಷಣೆ ಆಗಿರುವುದು.
- ತುಳುನಾಡಿನ ಕಲಾ ಲೋಕದ ದಿಗ್ಗಜರೆಂದೇ ಗುರುತಿಸಿಕೊಂಡಿರುವ ದೇವದಾಸ್ ಕಾಪಿಕಾಡ್ ಮತ್ತು ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರು ಮೊದಲ ಬಾರಿಗೆ ಒಂದೇ ಚಿತ್ರದಲ್ಲಿ ತೆರೆ ಹಂಚಿಕೊಂಡಿರುವುದು. ಈ ಇಬ್ಬರ ಕಮಾಲ್ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.
- ತುಳುನಾಡ ಮಾಣಿಕ್ಯ ಅರವಿಂದ್ ಬೋಳಾರ್ ಅಂದರೆ ತುಳು ಚಿತ್ರ ರಂಗಕ್ಕೊಂದು ಆಸ್ತಿ. ಇವರನ್ನು ಒಂದು ಪಾತ್ರದಲ್ಲಿ ನೋಡುವುದೇ ಪ್ರೇಕ್ಷಕರಿಗೆ ಕೂತೂಹಲ. ಆದರೆ ಬೋಳಾರ್ ಈ ಚಿತ್ರದಲ್ಲಿ ಮೂರು ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
- ಒಂದು ಆರೋಗ್ಯಪೂರ್ಣ ಹಾಸ್ಯ ಚಿತ್ರಕ್ಕೆ ಏನೆಲ್ಲಾ ಬೇಕೋ, ಅದೆಲ್ಲವೂ ಈ ಚಿತ್ರದಲ್ಲಿದೆ. ಹೀಗಾಗಿ ಪ್ಯಾಮಿಲಿ ಸಮೇತ ಯಾವುದೇ ಮುಜುಗರವಿಲ್ಲದೆ ವೀಕ್ಷಿಸುವಂತದ್ದು.
- ಹಳೆಯ ಒಂದು ಹಿಟ್ ಗೀತೆ ಈ ಚಿತ್ರದಲ್ಲಿ ಮತ್ತೊಮ್ಮೆ ಸೊಗಸಾಗಿ ಮೂಡಿಬಂದಿದೆ. ಇದರ ಜೊತೆಗೆ, ಇನ್ನೂ ಹಲವು ಹಾಡುಗಳು ಈ ಸಿನಿಮಾ ಬಿಡುಗಡೆಗೆ ಮುನ್ನವೇ ಎಲ್ಲರ ಗಮನಕೇಂದ್ರೀಕರಿಸಿದೆ. ತುಳುನಾಡಿನ ಹೆಸರಾಂತ ಗಾಯಕರಾದ ದೇವದಾಸ್ ಕಾಪಿಕಾಡ್ ಮತ್ತು ಜಗದೀಶ್ ಆಚಾರ್ಯ ಪುತ್ತೂರು ಕಂಠದಲ್ಲಿ ಮೂಡಿ ಬಂದಿರುವ ಹಾಡುಗಳಿಗೆ ಈಗಾಗಲೇ ಶಹಬ್ಬಾಸ್‌ಗಿರಿ ಸಿಕ್ಕಿದೆ.