ಬೆಂಗಳೂರು: ಹಾನಗಲ್ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿಗಾಗಿರುವ ಸೋಲು ಹಾಗೂ ಬಿಟ್ ಕಾಯಿನ್ ಹಗರಣ ಕುರಿತಂತೆ ಪ್ರತಿಪಕ್ಷ ಕಾಂಗ್ರೆಸ್ ನಾಯಕರು ಮಾಡುತ್ತಿರುವ ಆರೋಪವು ಕಮಲ ಪಾಳಯದಲ್ಲಿ ಭರ್ಜರಿ ವಿದ್ಯಮಾನಗಳಿಗೆ ಸಾಕ್ಷಿಯಾಗುತ್ತಿದೆ. ಈ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಬೆಂಬಲಕ್ಕೆ ನಿಂತಿದೆ.
ರಾಜ್ಯದಲ್ಲಿ ಪಕ್ಷವನ್ನು ಬಲಪಡಿಸುವಲ್ಲಿ ನಳಿನ್ ಕುಮಾರ್ ಕಟೀಲ್ ಅವರು ಸಮರ್ಥರಾಗಿದ್ದಾರೆ ಎಂದು ಪಕ್ಷದ ಪ್ರಮುಖರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಂಘದ ಮೂಲದಿಂದ ಬಂದಿರುವ ನಳಿನ್ ಕುಮಾರ್ ಕಟೀಲ್ ಅವರು, ಹಿಂದೆ ಪ್ರಚಾಕರಾಗಿ, ಕಾರ್ಯವಾಹರಾಗಿ ಸಂಘಟನೆಗಾಗಿ ದುಡಿದಿರುವವರು. ಇವರು ರಾಜ್ಯಾಧ್ಯಕ್ಷರಾದ ನಂತರದ ಬಹುತೇಕ ಉಪಚುನಾವಣೆಗಳಲ್ಲಿ ಬಿಜೆಪಿ ಗೆದ್ದಿದ್ದು, ಕಳೆದ ವಿಧಾನಸಭಾ ಚುನಾವಣೆಯಲ್ಲಿನ ಫಲಿತಾಂಶದ ನಂತರ ಹತ್ತಕ್ಕೂ ಹೆಚ್ಚು ಸ್ಥಾನಗಳನ್ನು ನಳಿನ್ ಅವರ ಸಂಘಟನಾ ಸಾರಥ್ಯದಲ್ಲಿ ಗಳಿಸುವಲ್ಲಿ ಬಿಜೆಪಿ ಶಕ್ತವಾಗಿದೆ ಎಂಬುದು ವರಿಷ್ಠರ ಅಭಿಪ್ರಾಯ.
ಈ ನಡುವೆ, ಬಿಜೆಪಿ ರಾಜ್ಯ ಉಸ್ತುವಾರಿ ನಾಯಕ ಅರುಣ್ ಸಿಂಗ್ ಹೇಳಿಕೆ ಗಮನಸೆಳೆದಿದೆ. ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅರುಣ್ ಸಿಂಗ್, ನಳಿನ್ ಕುಮಾರ್ ಕಟೀಲ್ ಹಾಗೂ ಸಿಎಂ ಬಸವರಾಜ್ ಬೊಮ್ಮಾಯಿ ಅವರ ನಾಯಕತ್ವವನ್ನು ಕೊಂಡಾಡಿದ್ದಾರೆ.
ಬೆಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅರುಣ್ ಸಿಂಗ್, ಸದ್ಯಕ್ಕೆ ರಾಜ್ಯದ ನಾಯಕತ್ವ ಬದಲಾವಣೆ, ರಾಜ್ಯಾಧ್ಯಕ್ಷರ ಬದಲಾವಣೆ ಇಲ್ಲ ಎಂದರು.
ಸಿಎಂ ಬಸವರಾಜ್ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದ ಅವರು, ಸಿಂಧಗಿಯಲ್ಲಿ ದೊಡ್ಡ ಮಟ್ಟದ ಅಂತರದಿಂದ ಗೆದ್ದಿದ್ದೇವೆ. ಹಾನಗಲ್‌ನಲ್ಲಿ ಕಡಿಮೆ ಅಂತರದಲ್ಲಿ ಸೋತಿದ್ದೇವೆ, ಮುಂದಿನ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದರು.
ಸಿಎಂ ಬದಲಾವಣೆ ವಿಚಾರವು ಕಾಂಗ್ರೆಸ್‌ನ ಗಾಳಿ ಸುದ್ದಿ ಅಷ್ಟೆ ಎಂದ ಅರುಣ್ ಸಿಂಗ್, ದೇಶದಲ್ಲಿ, ರಾಜ್ಯದಲ್ಲಿ ಕಾಂಗ್ರೆಸ್ ನೆಲಕಚ್ಚಿದೆ. ಕಾಂಗ್ರೆಸ್‌ನವರಿಗೆ ಮಾಡೋದಕ್ಕೆ ಬೇರೆ ಕೆಲಸವಿಲ್ಲದೇ ಡಿಕೆಶಿ, ಸಿದ್ದರಾಮಯ್ಯ ಗಾಳಿ ಸುದ್ದಿ ಹಬ್ಜಿಸುತ್ತಿದ್ದಾರೆ ಎಂದು ಕೈ ನಾಯಕರನ್ನು ತರಾಟೆಗೆ ತೆಗೆದುಕೊಂಡರು.