ಬೆಂಗಳೂರು: ಜೈನ್ ವಿವಿಯಲ್ಲಿ ಅಂಬೇಡ್ಕರ್‌ಗೆ ಅವಮಾನ ಮಾಡಲಾಗಿದೆ ಎಂಬ ಆರೋಪ ವಿದ್ಯಾರ್ಥಿ ಸಮುದಾಯವನ್ನು ರೊಚ್ಚಿಗೆಬ್ಬಿಸಿದೆ. ಘಟನೆ ಕುರಿತಂತೆ ನಿವೃತ್ತ ನ್ಯಾಯಾದೀಶರನ್ನು ಒಳಗೊಂಡ ಸಮಿತಿಯಿಂದ ತನಿಖೆ ನಡೆಸಿ ವರದಿಯನ್ನು ಪಡೆಯಬೇಕು ಎಂದು ಬೆಂಗಳೂರು ವಿವಿಯ ವಿದ್ಯಾರ್ಥಿಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬುಧವಾರ ಬೆಂಗಳೂರು ವಿವಿಯ ಜ್ಞಾನಭಾರತಿ ಆವರಣದಲ್ಲಿರುವ ಎಲ್ಲ ವಿಭಾಗಗಳಿಗೆ, ಕಚೇರಿಗಳಿಗೆ ಬೀಗ ಜಡಿದು, ಆಡಳಿತ ಕಚೇರಿಯ ಮುಂಭಾಗ ಸ್ವಾಭಿಮಾನಿ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ವೇದಿಕೆಯ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ದಲಿತ ಸಮುದಾಯಕ್ಕೆ ಮತ್ತು ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಉದ್ದೇಶದಿಂದಲೇ ಜೈನ್ ವಿವಿಯ ಉತ್ಸವದಲ್ಲಿ ವಿವಾದಿತ ಕಿರು ಚಿತ್ರವನ್ನು ಪ್ರದರ್ಶನ ಮಾಡಿದ್ದಾರೆ. ಹಾಗಾಗಿ ಘಟನೆನ್ನು ನಿಷ್ಪಕ್ಷಪಾತವಾಗಿ ತನಿಖೆ ಮಾಡದ ಹೊರತು ಪ್ರಕರಣಕ್ಕೆ ನ್ಯಾಯ ಒದಗಿಸಲು ಸಾಧ್ಯವಿಲ್ಲ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದರು.
ದೇಶಕ್ಕೆ ಸಂವಿಧಾನವನ್ನು ರಚನೆ ಮಾಡಿದ ಅಂಬೇಡ್ಕರ್ ಅವರಿಗೆ ಇತ್ತೀಚೆಗೆ ಉದ್ದೇಶಪೂರ್ವಕವಾಗಿ ಅವಮಾನ ಮಾಡಲಾಗುತ್ತಿದೆ. ರಾಯಚೂರಿನಲ್ಲಿ ಗಣರಾಜ್ಯೋತ್ಸವದಂದೇ ಅಂಬೇಡ್ಕರ್ ಭಾವಚಿತ್ರವನ್ನು ಕೆಳಗೆ ಇಳಿಸಿ ಅವಮಾನ ಮಾಡಲಾಗಿದೆ. ಜೈನ್ ವಿವಿಯಲ್ಲಿ ಅಂಬೇಡ್ಕರ್ ಅವರಿಗೆ ಅವಮಾನ ಮಾಡಲಾಗಿದೆ. ಆದರೆ ಸರಕಾರ ಯಾವುದೇ ಕ್ರಮವನ್ನು ಜರುಗಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕಿರು ನಾಟಕವೊಂದರಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಮಾಡಿ, ಜೈನ್ ವಿವಿಯ ಉತ್ಸವದಲ್ಲಿ ಅದನ್ನು ಪ್ರದರ್ಶನ ಮಾಡಿ ಸಂಭ್ರಮಿಸಲಾಗಿದೆ. ಈ ಹಿನ್ನಲೆಯಲ್ಲಿ ವಿಶ್ವವಿದ್ಯಾಲಯದ ಮಾನ್ಯತೆಯನ್ನು ಕೂಡಲೇ ರದ್ದು ಮಾಡಬೇಕು. ಯುಜಿಸಿ ಇದನ್ನು ಗಂಬೀರವಾಗಿ ಪರಿಗಣಿಸಿ ಯುಜಿಸಿ ನಿಯಮಗಳ ಅಡಿ ವಿವಿಗೆ ನಿರ್ಬಂಧ ವಿಧಿಸಬೇಕು ಎಂದು ಒತ್ತಾಯಿಸಿದರು.
ಜೈನ್ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ವಿರುದ್ಧ ಎಸ್ಸಿಎಸ್ಟಿ ದೌರ್ಜನ್ಯ ಕಾಯ್ದೆ ೧೯೮೯ರ ಅಡಿಯಲ್ಲಿ ಮತ್ತು ಭಾರತೀಯ ದಂಡ ಸಂಹಿತೆ ೧೮೬೦ರ ಅಡಿಯಲ್ಲಿ ದೇಶದ್ರೋಹದ ಪ್ರಕರಣವನ್ನು ದಾಖಲಿಸಿ, ಕಾನೂನಿನ ಅನುಸಾರ ಕ್ರಮವನ್ನು ಕೈಗೊಳ್ಳಬೇಕು. ದೇಶದ ಯಾವುದೇ ಶೈಕ್ಷಣಿಕ ಸಂಸ್ಥೆಗಳಲ್ಲಿ ಇಂತಹ ಘಟನೆ ಮರುಕಳಿಸದಂತೆ ಸರಕಾರ ಎಚ್ಚರಿಕೆಯನ್ನು ವಹಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಪ್ರತಿಭಟನೆಯಲ್ಲಿ ವಿದ್ಯಾರ್ಥಿ ಮುಖಂಡರಾದ ಲೋಕೇಶ್ ಎನ್., ಶಶಿಕುಮಾರ್ ಪಿ., ಬೈರಾಜ್, ನಂದೀಶ್, ಚಂದ್ರ ಮಿಡ್ಲಮನೆ, ಈಶ್ವರ್ ಸಿರಿಗೆರೆ, ಲಿಂಗರಾಜು, ಅರಣ್, ಶುಭಾಕರ್, ಪ್ರಭಾಕರ್, ತಿಲಾಕ್, ರಾಜೇಶ್, ವಿವಿಯ ಬೋಧಕ-ಬೋಧಕೇತರ ನೌಕಕರ ಸಂಘದ ಪದಾಧಿಕಾರಿಗಳು ಮತ್ತಿತರರು ಭಾಗವಹಿಸಿದ್ದರು.