ಬೆಂಗಳೂರು: ಹಿಜಾಬ್ ಕುರಿತಂತೆ ಉಂಟಾಗಿರುವ ವಿವಾದ ಕುರಿತಂತೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿಷಾದ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪ್ರತಿಕ್ರಿಯಿಸಿದ ರವಿ, ಹಿಜಬ್ ವಿಚಾರದಲ್ಲಿ ಕಾನೂನು ಪಾಲಿಸಲು ಅವರಿಗೆ ಇಷ್ಟವಿಲ್ಲ ಎನ್ನುವ ಮನಸ್ಥಿತಿಯನ್ನು ತೋರಿಸುತ್ತದೆ. ಈ ರೀತಿಯ ಬೆಳವಣಿಗೆಯೇ ನಮ್ಮ ದೇಶವನ್ನು ಹಲವು ತುಂಡು ಮಾಡಿದ್ದು. ಅಫಘಾನಿಸ್ತಾನ ಮಾಡಿದ್ದು, ಪಾಕಿಸ್ತಾನ ಮಾಡಿದ್ದು, ಬಾಂಗ್ಲಾ ಮಾಡಿದ್ದು ಇದೇ ಮನಸ್ಥಿತಿ ಎಂದು ವಿಶ್ಲೇಷಿಸಿದ್ದಾರೆ.
ಅಂಬೇಡ್ಕರ್ ಬರೆದ ಸಂವಿಧಾನವನ್ನು ಪಾಲಿಸುವುದಿಲ್ಲ ಎನ್ನುವ ಮನಸ್ಥಿತಿ ಸರಿಯಲ್ಲ ಎಂದ ಅವರು, ಇವತ್ತು ಹಿಜಾಬ್ ಬೇಡಿಕೆ ಇಡುತ್ತಾರೆ. ನಾಳೆ ಇನ್ನೊಂದು ಬೇಡುತ್ತಾರೆ. ಕೋರ್ಟ್ ಯಾವುದೇ ರೀತಿಯ ಧಾರ್ಮಿಕ ಸೂಚಿತ ಬಟ್ಟೆಗಳನ್ನು ಹಾಕಬಾರದು ಎಂದು ಹೇಳಿದ ಮೇಲೂ ಈ ರೀತಿಯ ಮನಸ್ಥಿತಿ ಪ್ರದರ್ಶನವು ಬಹಳ ಅಪಾಯಕಾರಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಒಂದು ಸಮುದಾಯದವರು ಹಿಜಾಬ್ ಕೇಳಿದಂತೆಯೇ, ದಿಗಂಬರ ಅನುಯಾಯಿಗಳು, ನಾಗಾ ಸಾಧು ಅನುಯಾಯಿಗಳು ತಮ್ಮ ಹುಟ್ಟುಡುಗೆಯಲ್ಲಿ ಶಾಲೆಗೆ ಬರುತ್ತೇವೆ ಎಂದರೆ ಪರಿಸ್ಥಿತಿ ಏನಾಗುತ್ತದೆ. ಗಾಂಧೀಜಿ ವೇಷದಲ್ಲಿ ಮೇಲಿನ ಬಟ್ಟೆ ಹಾಕಿಕೊಳ್ಳದೆ ಬರುತ್ತೇವೆಂದರೂ ಪರಿಸ್ಥಿತಿ ಏನಾಗಬಹುದು ಎಂಬ ಬಗ್ಗೆ ಆಲೊಚಿಸಬೇಕಿದೆ ಎಂದರು.