ಬೆಂಗಳೂರು: ರಾಜಧಾನಿ ಬೆಂಗಳೂರಿನ ಹೆಬ್ಬಾಳ ಸಮೀಪ ಮಸೀದಿ ಆವರಣದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ.
ಶುಕ್ರವಾರದ ಪ್ರಾರ್ಥನೆಯಲ್ಲಿ ಜನರು ತಲ್ಲೀನರಾಗಿದ್ದರು. ಅದೇ ಹೊತ್ತಿಗೆ ಮಸೀದಿಗೆ ಸೇರಿದ ಅಂಗಡಿ ಮಳಿಗೆಗಳಿರುವ ಕಟ್ಟಡದಲ್ಲಿ ಈ ಸ್ಫೋಟ ಘಟನೆ ಸಂಭವಿಸಿದೆ ಎನ್ನಲಾಗಿದೆ. ಅನಿಲ ಸೋರಿಕೆಯಾಗಿ ಮಸೀದಿಯ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದ್ದು, ಘಟನೆಯಿಂದ ಜನರು. ಮಸೀದಿಯ ಹೊರಗೆ ಸೇರಿದ್ದ ಜನರು ನೋಡ ನೋಡುತ್ತಿದ್ದಂತೆಯೇ ಬೆಂಕಿಯ ಕೆನ್ನಾಲಿಗೆ ಹೆಚ್ಚಾಗಿದ್ದಲ್ಲದೆ, ಭಯಾನಕ ಸದ್ದಿನೊಂದಿಗೆ ಸ್ಫೋಟದ ಸನ್ನಿವೇಶ ಕಂಡುಬಂತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ನಾಗವಾರದಿಂದ ಹೆಬ್ಬಾಳಕ್ಕೆ ತೆರಳುವ ರಸ್ತೆಯಲ್ಲಿರುವ ಮಸೀದಿ ಆವರಣದಲ್ಲಿ ಈ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಧಾವಿಸಿದ ಗೋವಿಂದಪುರ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದರು. ಇದು ಸಣ್ಣ ಘಟನೆಯಾಗಿದ್ದು ಜನ ಆತಂಕಪಡುವ ಅಗತ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.