ಬೆಂಗಳೂರು: ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಅಧಿಕಾರ ಸಿಕ್ಕಿಲ್ಲ ಎಂದು ಶೂನ್ಯ ಸಂಪಾದನೆಯಲ್ಲೂ ಸಂಭ್ರಮಿಸುವ ಮನಸ್ಥಿತಿಯನ್ನು ಕಾಂಗ್ರೆಸ್ ನಾಯಕರಲ್ಲಿ ಕಂಡಿದ್ದೇನೆ ಎಂದು ತಮಿಳುನಾಡು ರಾಜ್ಯ ಬಿಜೆಪಿ ಉಸ್ತುವಾರಿಯೂ ಆದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಹೇಳಿದ್ದಾರೆ
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ 5 ರಾಜ್ಯಗಳ ಚುನಾವಣೆಯಲ್ಲಿ ಕಳೆದುಕೊಂಡದ್ದಕ್ಕಿಂತ ಗಳಿಸಿದ್ದೇ ಹೆಚ್ಚು. ಅಸ್ಸಾಂನಲ್ಲಿ ಸ್ಥಾನವನ್ನು ಸುಭದ್ರವಾಗಿ ಇಟ್ಟುಕೊಂಡು ಪಕ್ಷ ಅಧಿಕಾರಕ್ಕೆ ಬಂದಿದೆ. ಪಶ್ಚಿಮ ಬಂಗಾಳದಲ್ಲಿ 3 ಸ್ಥಾನದಿಂದ 77 ಸ್ಥಾನಕ್ಕೆ ಏರಿದೆ. 74 ಸ್ಥಾನಗಳನ್ನು ಹೆಚ್ಚುವರಿಯಾಗಿ ಗಳಿಸಿದೆ. ಮತ ಗಳಿಕೆಯಲ್ಲೂ ಪ್ರಬಲ ಪಕ್ಷವಾಗಿ ಹೊರಹೊಮ್ಮಿದೆ. ಆದರೆ, ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳ ಮೈತ್ರಿಕೂಟವು ಹಿಂದೆ 66 ಸ್ಥಾನಗಳಿದ್ದವು. ಆ ಎರಡೂ ಪಕ್ಷಗಳು ಶೂನ್ಯದತ್ತ ಸಾಗಿವೆ ಎಂದು ವಿಶ್ಲೇಷಿಸಿದರು.
ಪಾಂಡಿಚೇರಿಯಲ್ಲಿ ಮೊದಲನೇ ಬಾರಿ ಎನ್‍ಡಿಎ ಅಧಿಕಾರಕ್ಕೆ ಬಂದಿದೆ. ಬಿಜೆಪಿ ಆರು ಸ್ಥಾನಗಳನ್ನು ಗೆದ್ದಿದೆ. ಎನ್‍ಆರ್ ಕಾಂಗ್ರೆಸ್ 10 ಸ್ಥಾನಗಳನ್ನು ಗೆದ್ದಿದೆ. ಇಲ್ಲಿ ಮೊದಲು 15 ಸ್ಥಾನಗಳಲ್ಲಿ ಗೆದ್ದಿದ್ದ ಕಾಂಗ್ರೆಸ್ ಈಗ ಕೇವಲ ಎರಡು ಸ್ಥಾನ ಪಡೆದಿದೆ. ತಮಿಳುನಾಡಿನಲ್ಲಿ 2016ರಲ್ಲಿ ಕೇವಲ ಒಂದು ಸ್ಥಾನ ಪಡೆದಿದ್ದ ನಾವು ನಾಲ್ಕು ಸ್ಥಾನ ಗೆದ್ದಿದ್ದೇವೆ. ಆದರೆ, ಇದರಿಂದ ನಮಗೆ ಸಮಾಧಾನವಾಗಿಲ್ಲ ಎಂದು ತಿಳಿಸಿದರು.
ಕೇರಳದಲ್ಲಿ ಇದ್ದ ಒಂದು ಸ್ಥಾನವನ್ನು ನಾವು ಕಳೆದುಕೊಂಡಿದ್ದೇವೆ. ಆದರೆ, ಮತ ಗಳಿಕೆಯನ್ನು ನಾವು ಕಾಪಾಡಿಕೊಂಡಿದ್ದೇವೆ. ಕೇರಳದಲ್ಲಿ ಪರ್ಯಾಯವಾಗಿ ಅಧಿಕಾರಕ್ಕೆ ಬರುವ ಅವಕಾಶವನ್ನು ಎಡಬಿಡಂಗಿ ಕಾರಣಕ್ಕಾಗಿ ಕಾಂಗ್ರೆಸ್ ಕಳೆದುಕೊಂಡಿದೆ. ಪಾಂಡಿಚೇರಿಯಲ್ಲಿ ಇದ್ದ ಅಧಿಕಾರವನ್ನು ಕಾಂಗ್ರೆಸ್ ಕಳೆದುಕೊಂಡಿದೆ. ಪಶ್ಚಿಮ ಬಂಗಾಳದಲ್ಲಿ ಶೂನ್ಯ ಸಂಪಾದನೆ ಮಾಡಿದೆ. ಹೀಗಿದ್ದೂ ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ ಎಂದು ಕಾಂಗ್ರೆಸ್ಸಿಗರು ಸಂಭ್ರಮಿಸುತ್ತಿದ್ದಾರೆ ಎಂದು ಕೈ ನಾಯಕರ ನಡೆ ಬಗ್ಗೆ ಸಿ.ಟಿ.ರವಿ ವ್ಯಂಗ್ಯವಾಡಿದರು.
ಮಹಾರಾಷ್ಟ್ರದ ವಿಧಾನಸಭೆಯ ಒಂದು ಉಪ ಚುನಾವಣೆಯ ಸ್ಥಾನ ನಮ್ಮದಾಗಿದೆ. ಕರ್ನಾಟಕದಲ್ಲೂ ಒಂದು ಲೋಕಸಭೆ ಮತ್ತು ಒಂದು ವಿಧಾನಸಭಾ ಸ್ಥಾನ ನಮ್ಮದಾಗಿದೆ ಎಂದ ಅವರು, ಒಂದು ವಿಧಾನಸಭೆ ಕ್ಷೇತ್ರವನ್ನು ಸೋತಿರುವುದು ಎಚ್ಚರಿಕೆಯ ಗಂಟೆ ಎಂದರು.
ಮೈಮರೆತರೆ ಕರ್ನಾಟಕದಲ್ಲಿ ದೊಡ್ಡ ಬೆಲೆಯನ್ನು ತೆರಬೇಕಾಗುತ್ತದೆ ಎಂಬ ಸಂದೇಶವನ್ನು ಮತದಾರರು ಈ ಚುನಾವಣೆಯ ಮೂಲಕ ಕೊಟ್ಟಿದ್ದಾರೆ. ನಾವು ಆಂತರಿಕ ಅವಲೋಕನ ಮಾಡಿಕೊಳ್ಳಲು ಮತದಾರರ ಎಚ್ಚರಿಕೆ ಇದಾಗಿದೆ ಎಂದು ತಿಳಿಸಿದರು.
ತಮಿಳುನಾಡಿನ ನಾಗರಕೊಯಿಲ್‍ನಲ್ಲಿ ಅತ್ಯಂತ ಬಡವರಾದ, ಬರಿಗಾಲಿನಲ್ಲೇ ನಡೆಯುವ ಬಿಜೆಪಿಯ ಗಾಂಧಿ ಅವರು ವಿಧಾನಸಭೆ ಪ್ರವೇಶಿಸಿರುವುದು ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಜನರ ವಿಶ್ವಾಸದ ಸಂಕೇತವಾಗಿದೆ ಎಂದು ಅವರು ವಿಶ್ಲೇಷಿಸಿದರು. ಪಶ್ಚಿಮ ಬಂಗಾಳದಲ್ಲೂ ಬಡತನದ ಹಿನ್ನೆಲೆ ಉಳ್ಳ ಚಂದನಾ ಭೌರಿ ಅವರು ಆಯ್ಕೆಯಾಗಿದ್ದು ಪ್ರಜಾಪ್ರಭುತ್ವದ ಮೌಲ್ಯಕ್ಕೆ ಜನರು ಕೊಟ್ಟ ಉಡುಗೊರೆ ಎಂದು ತಿಳಿಸಿದರು.
ಬಿಜೆಪಿ ಒಂದು ಸೈದ್ಧಾಂತಿಕ ಹಿನ್ನೆಲೆ ಇರುವ ಪಕ್ಷ. ಯಾವುದೇ ಚುನಾವಣೆಯು ನಮಗೆ ಅಂತಿಮವಲ್ಲ. ಈ ಸಾಧನೆ ನಮಗೆ ಅಂತಿಮವಲ್ಲ. ಪಂಚರಾಜ್ಯದ ಸಾಧನೆ ನಮಗೆ ಆರಂಭ ಅಷ್ಟೇ ಎಂದು ಅವರು ನುಡಿದರು. ಸ್ಥಾನಗಳನ್ನು ಕಳಕೊಂಡ ಕಾಂಗ್ರೆಸ್ಸಿಗರು 2016 ಮತ್ತು 2021ರ ಚುನಾವಣೆ ಫಲಿತಾಂಶವನ್ನು ತುಲನೆ ಮಾಡಿಕೊಳ್ಳಲಿ ಎಂದು ಸಲಹೆ ಮಾಡಿದರು.