ಬೆಂಗಳೂರು: ಚಾಮರಾಜನಗರದ ದುರಂತ ವಿಚಾರದಲ್ಲಿ ರಾಜ್ಯ ಸರ್ಕಾರವನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇದೇ ವೇಳೆ ಸಿಎಂ ಹಾಗೂ ಆರೋಗ್ಯ ಸಚಿವರ ರಾಜೀನಾಮೆಗೆ ಆಗ್ರಹಿಸಿರುವ ಕಾಂಗ್ರೆಸ್ ನಾಯಕರ ದ್ವಿಮುಖ ನಿಲುವಿನ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಚಾಮರಾಜನಗರದ ಆಸ್ಪತ್ರೆಯಲ್ಲಿನ ದುರಂತವನ್ನು ಘೋರ ಅನ್ಯಾಯ ಎಂದು ಹೇಳಿದರು. ಈ ದುರಂತಕ್ಕೆ ಯಾರೇ ಹೊಣೆ ಆಗಿದ್ದರೂ ಅವರ ಮೇಲೆ ಕಠಿಣ ಕ್ರಮ ಆಗಲೇಬೇಕು. ದೆಹಲಿ, ಮಹಾರಾಷ್ಟ್ರ ಮತ್ತಿತರ ರಾಜ್ಯಗಳಲ್ಲಿ ಆಗುತ್ತಿದ್ದ ದುರಂತ ನಮ್ಮ ರಾಜ್ಯದಲ್ಲೇ ಆಗಿರುವುದು ದುರ್ದೈವದ ಸಂಗತಿ ಎಂದು ಅವರು ವಿಷಾದಿಸಿದರು.
ಜವಾಬ್ದಾರಿ ಹೊತ್ತವರು ಎಷ್ಟು ಎಚ್ಚರ ವಹಿಸಬೇಕಿತ್ತೋ ಅಷ್ಟು ವಹಿಸಿಲ್ಲ ಎಂಬುದು ಸ್ಪಷ್ಟಗೊಂಡಿದೆ. ಈ ಕುರಿತು ತಕ್ಷಣ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ತೆಗೆದುಕೊಳ್ಳಲು ಅವರು ಮನವಿ ಮಾಡಿದರು. ವಿಷಯ ತಿಳಿದ ತಕ್ಷಣವೇ ಮುಖ್ಯಮಂತ್ರಿಗಳನ್ನು ಕಂಡು ಮಾತನಾಡಿದ್ದೇನೆ ಮತ್ತು ಆಮ್ಲಜನಕ ಸರಬರಾಜಿನಲ್ಲಿ ವಿಳಂಬ ಆಗದಂತೆ ನೋಡಿಕೊಳ್ಳಲು ಮನವಿ ಮಾಡಿದ್ದೇನೆ ಎಂದವರು ಹೇಳಿದರು.
ಚಾಮರಾಜನಗರ ಜಿಲ್ಲೆಯ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಅವರಿಂದಲೂ ಘಟನೆಯ ಬಗ್ಗೆ ಮಾಹಿತಿ ಸಂಗ್ರಹಿಸಿದ್ದೇನೆ ಎಂದ ರವಿ, ಇಂಥ ಘಟನೆಗಳು ಮರುಕಳಿಸದಂತೆ ಎಲ್ಲಾ ಜಿಲ್ಲೆಗಳಲ್ಲಿ ಮೇಲ್ವಿಚಾರಣಾ ವ್ಯವಸ್ಥೆ ಮಾಡುವಂತೆ ಸರ್ಕಾರಕ್ಕೆ ಸಲಹೆ ಮಾಡಿದರು.
ಬೇರೆ ರಾಜ್ಯಗಳ ದುರ್ಘಟನೆಗಳು ನಮಗೆ ಎಚ್ಚರಿಕೆ ಗಂಟೆ ಆಗಬೇಕಿತ್ತು. ಹಾಗಾಗದ ಕಾರಣ 24 ಜನರು ಬಲಿ ಆಗಿರುವುದು ಬೇಸರ ತಂದಿದೆ ಎಂದ ಅವರು. ಇದು ಯಾವ ದೃಷ್ಟಿಯಲ್ಲೂ ಕ್ಷಮೆಗೆ ಅರ್ಹ ಘಟನೆಯಲ್ಲ ಎಂದರು. ಆಮ್ಲಜನಕದ ಸರಬರಾಜಿನ ವಿಚಾರದಲ್ಲಿ ಸರಕಾರ ಮಧ್ಯ ಪ್ರವೇಶಿಸಬೇಕು. ಇದು ಆರೋಗ್ಯ ತುರ್ತು ಪರಿಸ್ಥಿತಿಯ ಕಾಲ ಎಂದು ಘೋಷಿಸಿ ಮತ್ತು ಸಮರೋಪಾದಿಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಸರ್ಕಾರಕ್ಕೆ ಸಲಹೆ ಮಾಡಿದರು.
ಕಾಂಗ್ರೆಸ್ ನಾಯಕರಿಗೆ ತರಾಟೆ
ಚಾಮರಾಜನಗರ ಘಟನೆ ಹಿನ್ನೆಲೆಯಲ್ಲಿ ಸಿಎಂ ಹಾಗೂ ಆರೋಗ್ಯ ಸಚಿವರ ರಾಜೀನಾಮೆಗೆ ಸಿದ್ದರಾಮಯ್ಯ ಆಗ್ರಹಿಸಿರುವ ಕುರಿತು ಪ್ರತಿಕ್ರಿಯಿಸಿದ ಸಿ.ಟಿ.ರವಿ, ದೆಹಲಿ, ಮಹಾರಾಷ್ಟ್ರ ರಾಜ್ಯಗಳಲ್ಲೂ ಚಾಮರಾಜನಗರ ಮಾದರಿಯ ದುರಂತಗಳಾಗಿವೆ. ಅಲ್ಲಿ ಮುಖ್ಯಮಂತ್ರಿಗಳ ರಾಜೀನಾಮೆಗೆ ಸಿದ್ದರಾಮಯ್ಯ ಅವರು ಒತ್ತಾಯಿಸಿದ್ದಾರೆಯೇ ಎಂದು ಪ್ರಶ್ನಿಸಿದರು. ರಾಜ್ಯದ ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರ ರಾಜೀನಾಮೆಯಿಂದ ಆ ರೋಗಿಗಳು ಎದ್ದು ಬರಲು ಸಾಧ್ಯವೇ ಎಂದು ಪ್ರಶ್ನಿಸಿದ ರವಿ, ಒಂದು ವೇಳೆ ರಾಜೀನಾಮೆಯಿಂದ ಜನರು ಬದುಕಿ ಬರುತ್ತಾರೆಂದಾದರೆ, ನಮಗೆ ಜನರ ಬದುಕಿಗಿಂತ ಅಧಿಕಾರ ದೊಡ್ಡದಲ್ಲ ಎಂದು ಸ್ಪಷ್ಟಪಡಿಸಿದರು.
ಕಳೆದ ತಿಂಗಳೇ ಸಿಎಂಗೆ ಪತ್ರ
ನಾನು ಏಪ್ರಿಲ್ 30ರಂದು ಒಂದಷ್ಟು ವಿವರಗಳೊಂದಿಗೆ ಮುಖ್ಯಮಂತ್ರಿಗಳಿಗೆ ಪತ್ರವೊಂದನ್ನು ಬರೆದಿದ್ದೆ. ಕೋರ್ಸ್ ಮುಗಿಸಿ ಸರ್ಟಿಫಿಕೇಟ್ ಸಿಗದ 7 ಸಾವಿರ ಎಂಬಿಬಿಎಸ್ ವೈದ್ಯರ ಸೇವೆಯ ಬಳಕೆ, ಅರೆ ವೈದ್ಯಕೀಯ ಸಿಬ್ಬಂದಿ ಹೆಚ್ಚಳ, ಟೆಲಿ ಮೆಡಿಸಿನ್ ವ್ಯವಸ್ಥೆ, ಒಒಡಿ ಮೇಲೆ ಇರುವವರನ್ನು ವಾಪಸ್ ಕರೆಸಿಕೊಳ್ಳುವುದು ಸೇರಿದಂತೆ ಹಲವು ಸಲಹೆಗಳನ್ನು ನೀಡಿದ್ದೇನೆ. ಅವುಗಳಲ್ಲಿ ಕೆಲವು ಈಗಾಗಲೇ ಅನುಷ್ಠಾನಗೊಂಡಿವೆ ಎಂದು ಸಿ.ಟಿ.ರವಿ ಮೆಚ್ಚುಗೆ ವ್ಯಕ್ತಪಡಿಸಿದರು.